ಮಂಗಳೂರು : ಒಂದು ಕಡೆ ಪೊಲೀಸ್ ನೇಮಕಾತಿಯಲ್ಲಿ ಅಕ್ರಮದ ಸುದ್ದಿ. ಮತ್ತೊಂದು ಕಡೆ ಪೊಲೀಸರ ದುಂಡಾವರ್ತನೆ.ಲಂಚಾವತರ. ಈ ಎರಡೂ ಘಟನೆಗಳನ್ನು ತುಲನೆ ಮಾಡಿದಾಗ ರಾಜ್ಯದಲ್ಲಿ ನಡೆದ ಪ್ರತೀ ಪೊಲೀಸ್ ನೇಮಕಾತಿಯನ್ನೂ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಆಗ್ಲೇ ಅಕ್ರಮವಾಗಿ ಅದೆಷ್ಟು ಮಂದಿ ಖಾಕಿ ತೊಟ್ಟಿದ್ದಾರೆ ಅನ್ನೋದು ಬಯಲಾಗುತ್ತದೆ.
ಈ ನಡುವೆ ಅಕ್ರಮವಾಗಿ ಅಮಾಯಕರನ್ನು ಠಾಣೆಗೆ ಎಳೆದೊಯ್ದು ದೈಹಿಕ ಹಲ್ಲೆ ನಡೆಸಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಬಜಪೆ ಪೊಲೀಸ್ ಠಾಣೆಯ ನಾಲ್ವರನ್ನು ಅಮಾನತು ಮಾಡಿ, ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿದ್ದಾರೆ. ದುರಂತ ಅಂದ್ರೆ ಇದರಲ್ಲಿ ಠಾಣೆಯ ಇನ್ಸ್ ಪೆಕ್ಟರ್ ಸಂದೇಶ್ ಕೂಡಾ ಸೇರಿದ್ದಾರೆ.
ಕಟೀಲು ದೇವಾಲಯದಲ್ಲಿ ಎಳನೀರು ಇಳಿಸುವ ಸಂಬಂಧ ನಡೆದ ಘಟನೆಯೊಂದರಲ್ಲಿ ಮೂವರನ್ನು ಠಾಣೆಗೆ ಕರೆಸಿಕೊಂಡಿದ್ದ ಇನ್ಸ್ ಪೆಕ್ಟರ್ ಸಂದೇಶ್, ಇಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಮಾನವೀಯತೆ ಮರೆತು ವರ್ತಿಸಿದ್ದ ಬಜಪೆ ಪೊಲೀಸರು ಮನುಷ್ಯರೇ ಅಲ್ಲ ಅನ್ನುವಂತೆ ವರ್ತಿಸಿದ್ದರು.
ಆದರೆ ಹಲ್ಲೆಗೊಳಗಾದವರು ಹಿಂದೂ ಸಂಘಟನೆ ಕಾರ್ಯಕರ್ತರಾಗಿದ್ದ ಕಾರಣ ಬಜಪೆ ಪೊಲೀಸರ ವಿರುದ್ಧ ಹೋರಾಟ ತೀವ್ರವಾಯಿತು. ಈ ಸಂಬಂಧ ಉತ್ತರ ವಿಭಾಗದ ಎಸಿಪಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಜಪೆ ಪೊಲೀಸರು ರೌಡಿಗಳಂತೆ ವರ್ತಿಸಿದ್ದು ಸಾಬೀತಾಗಿದೆ. ಹೀಗಾಗಿ ಇದೀಗ ಇನ್ಸ್ ಪೆಕ್ಟರ್ ಸಂದೀಪ್, ಸಿಬ್ಬಂದಿಗಳಾದ ಸೈಯದ್ ಇಮ್ತಿಯಾಜ್, ಪ್ರವೀಣ್, ಸುನಿಲ್ ಎಂಬವರನ್ನು ಅಮಾನತು ಮಾಡಲಾಗಿದೆ.
ಕೇವಲ ಹಲ್ಲೆ ಮಾತ್ರವಲ್ಲ ಇನ್ಸ್ ಪೆಕ್ಟರ್ ಸಂದೇಶ್ ಕರ್ತವ್ಯ ಲೋಪ ಎಸಗಿರುವುದು ಕೂಡಾ ಸಾಬೀತಾಗಿದೆ. ಎಳನೀರು ವ್ಯಾಪಾರಿ ಕೊಟ್ಟ ದೂರನ್ನು ದಾಖಲಿಸಿಕೊಳ್ಳದೆ, ಕೇವಲ ಮೌಖಿಕ ದೂರಿನ ಆಧಾರದಲ್ಲಿ ಹಲ್ಲೆ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಹಲ್ಲೆಗೊಳಗಾದವರು ಸಂಘಟನೆ ಕಾರ್ಯಕರ್ತರಾದ ಕಾರಣ, ಪೊಲೀಸರು ಅಮಾನತುಗೊಂಡಿದ್ದಾರೆ. ಒಂದು ವೇಳೆ ಪೆಟ್ಟು ತಿಂದವರು ಜನ ಸಾಮಾನ್ಯರಾಗಿರುತ್ತಿದ್ರೆ ಪರಿಸ್ಥಿತಿ ಹೇಗಿರುತ್ತಿತ್ತು.
Discussion about this post