ಗುಜರಾತ್ : ಅಹಮದಾಬಾದ್ ನಗರದ ಹೊರವಲಯದಲ್ಲಿರುವ ಕೊಠಡಿಯೊಂದರಲ್ಲಿ ಅನಿಲ ಸೋರಿಕೆಯಾಗಿ LPG ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿ ಮೃತಪಟ್ಟ ಘಟನೆ ನಡೆದಿದೆ.
ಜುಲೈ 20ರ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೆ 7 ಮಂದಿ ಮೃತಪಟ್ಟಿದ್ದಾರೆ.
ಕಾರ್ಖಾನೆಯೊಂದರ ಕೆಲವು ಕಾರ್ಮಿಕರು ಮತ್ತು ಅವರ ಕುಟುಂಬದವರು ಸಣ್ಣ ಕೊಠಡಿಯೊಂದರಲ್ಲಿ ಮಲಗಿದ್ದರು. ಈ ವೇಳೆ LPG ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿದೆ. ಗ್ಯಾಸ್ ವಾಸನೆ ಪಕ್ಕದ ಮನೆಯವರಿಗೆ ಬಂದಾಗ ಎಚ್ಚರಿಕೆ ನೀಡಲು ನೆರೆ ಮನೆಯವರು ಬಂದು ಕದ ತಟ್ಟಿದ್ಧಾರೆ. ಯಾರೋ ಬಾಗಿಲು ತಟ್ಟುತ್ತಿದ್ದಾರೆ ಎಂದು ಎದ್ದ ಕಾರ್ಮಿಕರು ಲೈಟ್ ಸ್ವಿಚ್ ಹಾಕಿದ್ದಾರೆ. ಆಗ ಅನಿಲ ತುಂಬಿದ ಕೊಠಡಿಯಲ್ಲಿ ಸ್ಪೋಟ ಸಂಭವಿಸಿತ್ತು.
ಮೃತ ಕಾರ್ಮಿಕರು ಮಧ್ಯಪ್ರದೇಶದ ಗುನಾ ಜಿಲ್ಲೆಯ ಮಧುಸೂದನಗಢದವರು ಎಂದು ಗೊತ್ತಾಗಿದೆ. ಈ ನಡುವೆ ಸಿಲಿಂಡರ್ ಸ್ಫೋಟದಲ್ಲಿ ಸಾವಿಗೀಡಾದ ಕಾರ್ಮಿಕರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಲಾ ₹4 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ₹ 2 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
Discussion about this post