ಬೆಂಗಳೂರು : ವಿದೇಶಿ ಪ್ರಜೆಗೆ ಸಹಾಯ ಮಾಡುವ ನೆಪದಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ಹೊಟೇಲ್ ನಿಂದ ಕರೆದುಕೊಂಡು ಹೋಗಿ ಸುಲಿಗೆ ಮಾಡಿದ ಪ್ರಕರಣ ಸಂಬಂಧ ಕೆಜಿ ಹಳ್ಳಿಯ ಸೈಯದ್ ಇಮ್ರಾನ್ ಎಂಬಾತನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಉದ್ಯಮ ಹೊಂದಿರುವ ಆಸೋ, ಉದ್ಯಮವನ್ನು ಭಾರತಕ್ಕೂ ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಮೇ 23 ರಂದು ನಗರಕ್ಕೆ ಆಗಮಿಸಿದ್ದ ಅವರು ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಫಾರ್ಚೋ ಇನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.
ನಗರದಲ್ಲಿ ಉದ್ಯಮ ಸ್ಥಾಪಿಸಲು ಸ್ಥಳೀಯ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಲು ಯತ್ನಿಸಿದ್ದಾರೆ. ತಾಂತ್ರಿಕ ಕಾರಣದಿಂದ ಖಾತೆ ತೆರೆಯಲಾಗಲಿಲ್ಲ. ಹೀಗಾಗಿ ತನ್ನ ದೇಶದ ಕರೆನ್ಸಿಯನ್ನು ಭಾರತೀಯ ಕರೆನ್ಸಿಗೆ ವಿನಿಮಯ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಕಾರಣದಿಂದ ಹೋಟೆಲ್ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ.
ಈ ನಡುವೆ ಹೋಟೆಲ್ ಬಾಡಿಗೆ ಪಾವತಿಸುವಂತೆ ಆಸೋಗೆ ಹೋಟೆಲ್ ಸಿಬ್ಬಂದಿ ಸೂಚಿಸಿದ್ದಾರೆ. ಆನ್ ಲೈನ್ ಮೂಲಕ ಬಾಡಿಗೆ ಪಾವತಿಸುತ್ತೇನೆ ಅಂದ್ರೆ ಸಿಬ್ಬಂದಿ ಕೇಳಲಿಲ್ಲ. ಇದರಿಂದ ಮಾತಿಗೆ ಮಾತು ಬೆಳೆದು ಹೋಟೆಲ್ ಸಿಬ್ಬಂದಿ ಆಶೋ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಮೋಜು ಮಸ್ತಿಗಾಗಿ ಹೋಟೆಲ್ ಗೆ ಬಂದಿದ್ದ, ಸೈಯದ್ ಮತ್ತು ಆತನ ಗೆಳೆಯರು ಆಸೋಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕೆಜಿ ಹಳ್ಳಿ ಕಡೆ ಕರೆದುಕೊಂಡು ಹೋಗಿದ್ದಾರೆ.
ಅಪರಿಚಿತರ ವರ್ತನೆ ಬಗ್ಗೆ ಅನುಮಾನಗೊಂಡ ಆಸೋ, ಬೈಕ್ ನಿಂದ ಇಳಿಸುವಂತೆ ಹೇಳಿದ್ದಾರೆ. ಈ ವೇಳೆ ಚಾಕು ತೋರಿಸಿದ ಇಮ್ರಾನ್ ಗ್ಯಾಂಗ್, ವಿದೇಶಿ ಪ್ರಜೆಯಿಂದ ಮೊಬೈಲ್, ಹಣ ಮತ್ತು ಎರಡು ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಇದಾದ ಬಳಿಕ ಆಸೋ ಗೋವಿಂದಪುರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಆರೋಪಿ ಇಮ್ರಾನ್ ನನ್ನು ಬಂಧಿಸಿದ್ದು, ತಪ್ಪಿಸಿಕೊಂಡಿರುವ ಮತ್ತಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
Discussion about this post