ಕೊಲೆಗಾರ ಅದೆಷ್ಟೇ ಚಾಣಕ್ಯನಂತೆ ವರ್ತಿಸಿದರೂ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತು.
ರವಿಚಂದ್ರನ್ ಅಭಿನಯ ದೃಶ್ಯದಂತಹ ಸಿನಿಮಾಗಳಲ್ಲಿ ಮಾತ್ರ ಆರೋಪಿಗಳು ಪಾರಾಗಲು ಸಾಧ್ಯ ಹೊರತು, ಒಂದಲ್ಲ ಒಂದು ಒಂದು ದಿನ ರಿಯಲ್ ಲೈಫ್ ನಲ್ಲಿ ಸಿಕ್ಕಿ ಹಾಕಿಕೊಳ್ಳಲೇಬೇಕು.
ಹಾಗೇ ಫ್ರಾನ್ಸ್ ನಲ್ಲಿ ಕೊಲೆಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬನ ಹತ್ಯೆ ಪ್ರಕರಣವನ್ನು ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಸಿಗರೇಟ್ ಲೈಟರ್ ಸಹಾಯದಿಂದ ಬೇಧಿಸಲಾಗಿದೆ.
ಕಳೆದ ಅಕ್ಟೋಬರ್ ನಲ್ಲಿ ಬೋರ್ಬೌರ್ಗ್ ನಲ್ಲಿ ರಾಷ್ಟ್ರೀಯತೆ, ಲಿಂಗವನ್ನು ಗುರುತಿಸಲು ಅಸಾಧ್ಯ ಸ್ಥಿತಿಯಲ್ಲಿ ಕೊಳೆತ ಮೃತ ದೇಹವೊಂದು ಪತ್ತೆಯಾಗಿತ್ತು.
ಮೃತ ದೇಹದಲ್ಲಿ ಯಾವುದೇ ದಾಖಲೆ,ಮೊಬೈಲ್ ಫೋನ್ ಇರಲಿಲ್ಲ. ಹೀಗಾಗಿ ಇದೊಂದು ಸಹಜ ಸಾವೋ, ಕೊಲೆಯೋ ಅನ್ನುವುದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆ ನೋವಾಗಿತ್ತು.
ಹೀಗಾಗಿ ಸಾವಿನ ರಹಸ್ಯ ಬೇಧಿಸುವ ಜವಾಬ್ದಾರಿಯನ್ನು ಲಿಲ್ಲೆ ತನಿಖಾಧಿಕಾರಿಗಳ ತಂಡ ವಹಿಸಿಕೊಂಡಿತು. ಡಿಎನ್ಎ ಮತ್ತು ಫಿಂಗರ್ ಪ್ರಿಂಟ್ ಗಳು ಇಲ್ಲಿ ಸಹಾಯಕ್ಕೇ ಬರಲೇ ಇಲ್ಲ.
ಆದರೆ ಈ ವೇಳೆ ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಸಿಗರೇಟ್ ಲೈಟರ್ ಮಾತ್ರ ಪೊಲೀಸರ ತನಿಖೆಗೆ ದಾರಿ ತೋರಿಸಬೇಕಿತ್ತು.
ಲೈಟರ್ ಮೇಲೆ “ಕ್ರೋಗ್ ಕೆಫೆ” ಎಂಬ ಸ್ಟಿಕ್ಕರ್ ಇರೋದನ್ನು ಗಮನಿಸಿದ್ದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದ್ದರು. ನಾವು ಬೆಲ್ಜಿಯಂ ಫೆಡರಲ್ ಪೋಲಿಸ್ ಸಹಾಯ ಪಡೆದ ಲಿಲ್ಲೆ ಪೊಲೀಸರು ಕೊಲೆ ರಹಸ್ಯವನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ.
ಲೈಟರ್ ಮೇಲಿದ್ದ ಕೆಫೆ ಬೆಲ್ಜಿಯಂ ದೇಶದಲ್ಲಿ ಹೆಸರುವಾಸಿಯಾಗಿರುವ ಕೆಫೆ. ಬೆಲ್ಜಿಯಂ ಹಾಗೂ ನೆದರ್ ಲ್ಯಾಂಡ್ ಗಡಿಯಂಚಿನಲ್ಲಿದ್ದ ಹತ್ಯೆಗೀಡಾಗಿದ್ದ ವ್ಯಕ್ತಿಯ ಮನೆ ಸಮೀಪವೇ ಆ ಕೆಫೆ ಇತ್ತು.
ಯಾವಾಗ ಲಿಲ್ಲೆ ಪೊಲೀಸರು ಬೆಲ್ಜಿಯಂ ಪೊಲೀಸರತ್ತ ಸಹಾಯ ಹಸ್ತ ಚಾಚಿದರೋ, ಜೂನ್ ನಿಂದ ಬೆಲ್ಜಿಯಂ ನಲ್ಲಿ ನೆಲೆಸಿದ್ದ ಭಾರತೀಯ ನಿವಾಸಿ ದರ್ಶನ್ ಸಿಂಗ್ ನಾಪತ್ತೆ ಪ್ರಕರಣಕ್ಕೆ ಜೀವ ಬಂತು. ಬೆಲ್ಜಿಯಂ ಪೋಲೀಸರು ದರ್ಶನ್ ಸಿಂಗ್ ಗಾಗಿ ಹುಡುಕಾಟ ನಡೆಸುತ್ತಿದ್ದರು.
ಇದರ ಆಧಾರದ ಮೇಲೆ ಹತ್ಯೆಯಾದವನ ಗುರುತನ್ನು ಆತನ ಟೂತ್ ಬ್ರಷ್ ಗಳಿಂದ ಪತ್ತೆ ಹಚ್ಚಿದರು.
ಕೊನೆಗೆ ಬೆಲ್ಜಿಯಂ ನಲ್ಲಿ ನೆಲೆಸಿರುವ ಭಾರತೀಯ ನಿವಾಸಿ ದರ್ಶನ್ ಸಿಂಗ್ ಅನ್ನುವಾತನೇ ಕೊಲೆಯಾದ ವ್ಯಕ್ತಿ ಎಂದು ಖಚಿತ ಪಡಿಸಿಕೊಂಡರು.
ಕೊಲೆಯಾದವನ ಗುರುತು ಸಿಕ್ತು, ಹಾಗಾದರೆ ಕೊಲೆ ಮಾಡಿದವನು ಯಾರು ಅನ್ನುವ ಪ್ರಶ್ನೆ ಹುಟ್ಟುಕೊಂಡಿತು. ಹೀಗಾಗಿ ಮತ್ತೆ ವಿಚಾರಣೆ ಪ್ರಾರಂಭಿಸಿದ ಬೆಲ್ಜಿಯಂ ತನಿಖಾ ದಳ ಶಂಕಿತ ಕೊಲೆಗಾರನೊಬ್ಬನನ್ನು ಬಂಧಿಸಿದೆ.
ಈಗಾಗಲೇ ಸಿಂಗ್ ಕೊಲೆ ರಹಸ್ಯ ಗೊತ್ತಾಗಿದ್ದು, ತನಿಖೆ ಪೂರ್ತಿಗೊಳ್ಳುವ ತನಕ ಕೊಲೆಯ ಉದ್ದೇಶ ಬಹಿರಂಗಪಡಿಸುವುದಿಲ್ಲ ಅಂದಿದ್ದಾರೆ. ಈ ನಡುವೆ ಫ್ರಾನ್ಸ್ ಅಧಿಕಾರಿಗಳು ಕೊಲೆ ಪ್ರಕರಣದ ದಾಖಲೆಗಳನ್ನು ಬೆಲ್ಜಿಯಂ ಪೋಲೀಸರಿಗೆ ಹಸ್ತಾಂತರಿಸಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಬೆಲ್ಜಿಯಂ ಬಂಧಿಸಲ್ಪಟ್ಟಿರುವ ವ್ಯಕ್ತಿ ಭಾರತೀಯ ಮೂಲದವನೆಂದು ಗೊತ್ತಾಗಿದೆ. ಈ ಕೊಲೆಯಲ್ಲಿ ಸಿಗರೇಟ್ ಲೈಟರ್ ಸಾಕ್ಷ ಹೆಚ್ಚು ಮಹತ್ವದ್ದೆಂದು ಭಾವಿಸಲಾಗಿದೆ.
Discussion about this post