ಚಿಕ್ಕಬಳ್ಳಾಪುರ : ಲಾರಿ ಮತ್ತು ಜೀಪ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿದೆ. ಘಟನೆಯಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದಾರೆ. ಜೀಪ್ ನಲ್ಲಿ ಚಾಲಕ ರಮೇಶ್ ಸೇರಿ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದರು. ಪ್ರಸ್ತುತ 8 ಜನ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ 8 ವರ್ಷದ ಬಾಲಕ ಪವಾಡ ಅನ್ನುವಂತೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಲವಾಟ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕೋಲಾಕದ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡುವಿನಿಂದ ಚಿಂತಾಮಣೆ ನಗರಕ್ಕೆ ಜೇಪು ಆಗಮಿಸುತ್ತಿತ್ತು. ಈ ವೇಳೆ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಜೀಪ್ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.
ಮೃತರನ್ನು ಶ್ರೀನಿವಾಸಪುರದ ಮೋನಿಕಾ (28), ನಿಖಿಲ್ (20), ಕಿತ್ತಗನೂರು ಗ್ರಾಮದ ರಾಜಪ್ಪ (66), ಮುನಿಕೃಷ್ಣ (49), ಆಂಧ್ರ ನಾರನ್ನಗಾರಪಲ್ಲಿಯ ವೆಂಕಟಲಕ್ಷ್ಮಮ್ಮ ( 59), ಜೀಪ್ ಚಾಲಕ ರಮೇಶ್, ಚಿಂತಾಮಣಿ ಗೋಪಲ್ಲಿಯ ಮುನಿರತ್ನಮ್ಮ (49) ಸೊಣ್ಣಶೆಟ್ಟಿಗಳ್ಳಿಯ ನಾರಾಯಣಸ್ವಾಮಿ (55) ಎಂದು ಗುರುತಿಸಲಾಗಿದೆ.

ಇನ್ನು ಈ ಅಪಘಾತಕ್ಕೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ನೇರ ಹೊಣೆಯಾಗಿದ್ದು, ಮರೆಯಲ್ಲಿ ನಿಂತು ದಂಡ ಹಾಕುವ ಪೊಲೀಸರ ಕಣ್ಣಿಗೆ ವೈಟ್ ಬೋರ್ಡ್ ಜೀಪ್ ನಲ್ಲಿ 17 ಮಂದಿ ಪ್ರಯಾಣಿಸುತ್ತಿರುವುದು ಬಿದ್ದಿಲ್ಲವ್ಯಾಕೆ. ಟೋಯಿಂಗ್ ವಾಹನದಲ್ಲಿ ಕಳ್ಳರಂತೆ ವಾಹನ ಎತ್ತುವ ಪೊಲೀಸರು, ಒಂದು ಜೀಪ್ ನಲ್ಲಿ 17 ಮಂದಿಯನ್ನು ಒಯ್ಯಲು ಅನುಮತಿ ಕೊಟ್ಟಿದ್ದು ಹೇಗೆ ಅನ್ನುವುದು ಈಗಿರುವ ಪ್ರಶ್ನೆ.
ಇನ್ನು ಸಾರಿಗೆ ಇಲಾಖೆ ಈ ಹಳ್ಳಿಗೊಂದು ಸೂಕ್ತ ಬಸ್ ಸೌಲಭ್ಯ ಕಲ್ಪಿಸಿರುತ್ತಿದ್ರೆ ಜನ ಜೀಪ್ ನೇತಾಡಿಕೊಂಡು ಹೋಗುವ ಪ್ರಮೇಯ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಶಾಸಕ ರಮೇಶ್ ಕುಮಾರ್ ಈ ಹಿಂದೆ ಹೇಳಿದಂತೆ ಅಮಾಯಕ ಜೀವಗಳ ಸಾವಿಗೆ ಕಾರಣರಾದವರ ಕುಟುಂಬಕ್ಕೆ ಇದರ ಶಾಪ ತಟ್ಟದಿರಲು ಸಾಧ್ಯವೇ..?
Discussion about this post