ಜನಪರ ಹೋರಾಟದ ಮುಖವಾಡ ಹಾಕಿಕೊಂಡವರ ಹಿಂದೆ ಇರುವುದು ಕರಾಳ ಇತಿಹಾಸವೇ ಅನ್ನುವ ಪ್ರಶ್ನೆಯೊಂದು ಮೂಡುತ್ತಿದೆ.
ಬೆಂಗಳೂರು : ರೈತ ನಾಯಕ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದ ಪ್ರಕರಣ ಸಂಬಂಧ, ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆಯನ್ನೇ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಶಿವಶಕ್ತಿ ಮಹಿಳಾ ಸಂಘಟನೆಯ ಉಮಾದೇವಿ (52) ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ಈ ಹಿಂದೆ ಬಂಧಿತರಾಗಿದ್ದ ಭರತ್ ಶೆಟ್ಟಿ, ಶಿವಕುಮಾರ್ ಮತ್ತು ಪ್ರದೀಪ್ ನಾಯಕ್ ಕೊಟ್ಟ ಮಾಹಿತಿ ಹಿನ್ನಲೆಯಲ್ಲಿ ಉಮಾದೇವಿಯನ್ನು ಬಂಧಿಸಲಾಗಿತ್ತು. ಶಿವಕುಮಾರ್ ಉಮಾದೇವಿಯ ಸಹೋದರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಈ ಶಿವಕುಮಾರ್ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಯನ್ನು ಕೂಡಾ ಈ ಹಿಂದೆ ಅನುಭವಿಸಿದ್ದ ಎಂದು ಗೊತ್ತಾಗಿದೆ.
ಇನ್ನು ಉಮಾದೇವಿ ಬಂಧನದ ಬೆನ್ನಲ್ಲೇ ಹೆಬ್ಬಾಳದಲ್ಲಿರುವ ಆಕೆಯ ಮನೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 7 ಮಚ್ಚು, 2 ತಲ್ವಾರ್ ಗಳು ಸಿಕ್ಕಿದೆ. ಮಾರಕಾಸ್ತ್ರಗಳ ಕುರಿತಂತೆ ಉಮಾದೇವಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಶಿವಶಕ್ತಿ ಮಹಿಳಾ ಸಂಘ ಮತ್ತು ಟ್ರಸ್ಟ್ ಸ್ಥಾಪಿಸಿದ್ದ ಉಮಾದೇವಿ ಮಹಿಳಾ ಪರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು, ಮಹಿಳೆಯರಿಗಾಗಿ ಅನ್ಯಾಯವಾಗಿದೆ ಅನ್ನುವ ಸಂದರ್ಭಗಳಲ್ಲಿ ಈ ಉಮಾದೇವಿ ಟಿವಿಗಳಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಇದೇ ಉಮಾದೇವಿ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು 6 ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Discussion about this post