ಬೆಂಗಳೂರು : 17 ವರ್ಷದ ಯುವಕನೊಂದಿಗಿನ ಗೃಹಿಣಿಯ ಸ್ನೇಹ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಬನಶಂಕರಿಯ ಯಾರಬ್ ನಗರದಲ್ಲಿ ನಡೆದಿದೆ.
ಯಾರಬ್ ನಗರದ ಆಫ್ರಿನ್ ಖಾನ್ ( 28) 9 ವರ್ಷಗಳ ಹಿಂದೆ ಲಾಲು ಖಾನ್ ಜೊತೆ ವಿವಾಹವಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಫ್ರಿನ್ ಮನೆಯಲ್ಲೇ ಟೈಲರಿಂಗ್ ಮಾಡಿಕೊಂಡಿದ್ದು, ಲಾಲು ಗುರಪ್ಪನಪಾಳ್ಯದ ಟಿಂಬರ್ ಯಾರ್ಡ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ.
ಈ ನಡುವೆ ಪಿಯುಸಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿ ಜೊತೆಗೆ ಆಫ್ರಿನ್ಗೆ ಸ್ನೇಹ ಬೆಳೆದಿತ್ತು. ಈ ಸ್ನೇಹ ‘ ಆತ್ಮೀಯತೆ ’ ಗೆ ತಿರುಗಿತ್ತು. ಮಂಗಳವಾರ ಬೆಳಗ್ಗೆ ಪತಿ ಲಾಲು ಖಾನ್ ಕೆಲಸಕ್ಕೆ ಹೋದ ವೇಳೆ ವಿದ್ಯಾರ್ಥಿ ಆಫ್ರಿನ್ ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿದೆ.
![murder bng1](https://torrentspree.com/wp-content/uploads/2021/10/murder-bng1.png)
ಪರಸ್ಪರ ಶುರುವಾದ ಮಾತಿನ ಚಕಮಕಿ ಗಲಾಟೆಗೆ ತಿರುಗಿದೆ. ಈ ವೇಳೆ ಕೈಗೆ ಸಿಕ್ಕ ಕತ್ತರಿಯಿಂದ ಹಿರಿಯ ಗೆಳತಿಗೆ ಇರಿದ ವಿದ್ಯಾರ್ಥಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಬಟ್ಟೆಗೆ ಬೆಂಕಿ ಹಚ್ಚಿ, ಮನೆ ಬಾಗಿಲು ಎಳೆದು ಪರಾರಿಯಾಗಿದ್ದಾನೆ. ಸಂಜೆ ಆಫ್ರಿನ್ ಮನೆಯಿಂದ ದಟ್ಟ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಸಮೀಪದಲ್ಲೇ ನೆಲೆಸಿದ್ದ ಆಫ್ರಿನ್ ಸಹೋದರನಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕದಳ ಬೆಂಕಿ ನಂದಿಸಿದೆ.
ನಂತರ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಬಳಿಕ ಸ್ಥಳೀಯರು ನೀಡಿದ ಮಾಹಿತಿಯಂತೆ ಆರೋಪಿಯನ್ನು ಬನಶಂಕರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
![murder bng](https://torrentspree.com/wp-content/uploads/2021/10/murder-bng.png)
Discussion about this post