ಕಿಚ್ಚ ಸುದೀಪ್ ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ಸಂದಿದೆ. ಕಾಲು ಶತಮಾನದ ಪಯಣದಲ್ಲಿ ಸುದೀಪ ಕಂಡ ಏಳು-ಬೀಳು, ನೋವು ನಲಿವು ನೂರಾರು, ಒಂದು ಕಾಲದಲ್ಲಿ ಐರನ್ ಲೆಗ್ ಎಂದು ಕರೆಸಿಕೊಂಡ ಸುದೀಪ ಇದೀಗ ನಿರ್ಮಾಪಕರ ಪಾಲಿಗೆ ಏನು ಅನ್ನುವುದು ಎಲ್ಲರಿಗೂ ಗೊತ್ತು.
ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಸುದೀಪ್ ಹೆಸರು ರಾರಾಜಿಸುತ್ತಿದೆ ಅಂದ್ರೆ ಅದ್ಯಾವ ಮಟ್ಟಿನ ಸಾಧಕ ಅನ್ನುವುದು ಅರ್ಥವಾಗುತ್ತದೆ.
ಸುದೀಪ್ ಅವರ ಜರ್ನಿಯಲ್ಲಿ ದೊಡ್ಡ ತಿರುವು ನೀಡಿದ ಚಿತ್ರ ಅಂದ್ರೆ ಅದು ಹುಚ್ಚ.ಇದೀಗ ಹುಚ್ಚ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಸಂದಿದೆ. 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ಬಿಡುಗಡೆಯಾಗಿತ್ತು. ಹಿಂದಿನಂತೆ ಈ ಸಿನಿಮಾ ಕೂಡಾ ಸೋಲುತ್ತದೆ ಎಂದು ಆತಂಕದಿಂದ ಮನೆಯಲ್ಲಿ ಕೂತಿದ್ದ ಸುದೀಪ್ ಅವರನ್ನು ಕಿಚ್ಚ ಮಾಡಿದ ಚಿತ್ರವಿದು.
ಇನ್ನು ಹುಚ್ಚ ಸಿನಿಮಾದ ಬಳಿಕ ಹಲವು ಹಿಟ್ ಸಿನಿಮಾ ನೀಡಿದ ಸುದೀಪ್ 11 ವರ್ಷಗಳ ಬಳಿಕ ಅಂದರೆ 2012ರಲ್ಲಿ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜೊತೆ ರಾಜಮೌಳಿ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು.
ಈ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಜಯಭೇರಿ ಬಾರಿಸಿತು. ಅಚ್ಚರಿ ಅಂದ್ರೆ ‘ಈಗ’ ಬಿಡುಗಡೆಯಾಗಿದ್ದು ಕೂಡಾ ಜುಲೈ.6ರಂದು. ಹೀಗಾಗಿ ಕಿಚ್ಚ ಸುದೀಪ್ ಈ ಎರಡೂ ಸಿನಿಮಾಗಳನ್ನು ಮೆಲುಕು ಹಾಕಿದ್ದಾರೆ.
Discussion about this post