ಜಾಗತಿಕ ಈಜು ಕ್ಷೇತ್ರದಲ್ಲಿ ಭಾರತ ಇನ್ನೂ ಸಾಧನೆ ಮಾಡುವುದು ಸಾಕಷ್ಟಿದೆ.ಇದಕ್ಕೆ ವಿಪುಲ ಅವಕಾಶವಿದ್ದು, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಭಾರತೀಯ ಈಜುಪಟುಗಳು ಈಗಾಗಲೇ ಸಿದ್ದವಾಗಿದ್ದಾರೆ.
ಈ ನಡುವೆ ಭಾರತ ಈಜು ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದು. 200 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆಯಲ್ಲಿ ಕೇರಳದ ಸಾಜನ್ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದಾರೆ. ಈ ಮೂಲಕ ಈಜಿನಲ್ಲಿ ಅಂತರರಾಷ್ಟ್ರೀಯ ‘ಎ’ ಸ್ಟಾಂಡರ್ಡ್ ಮಟ್ಟ ಮುಟ್ಟಿದ ಮೊದಲ ಭಾರತೀಯ ಈಜುಪಟು ಎಂಬ ಕೀರ್ತಿಗೆ ಸಾಜನ್ ಪಾತ್ರರಾಗಿದ್ದಾರೆ.
ಇಟಲಿಯ ರೋಮ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವರು 200 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆಯಲ್ಲಿ 1:56:38 ನಿಮಿಷದಲ್ಲಿ ಈಜಿ ಚಿನ್ನದ ಪದಕ ಪಡೆದಿದ್ದಾರೆ. ಈ ದೂರವನ್ನು ಕ್ರಮಿಸಲು ಒಲಿಂಪಿಕ್ಸ್ ನಲ್ಲಿ 1:56:48 ನಿಮಿಷಗಳ ಎ ಸ್ಟಾಂಡರ್ಡ್ ಮಟ್ಟವನ್ನು ನಿಗದಿಗೊಳಿಸಿತ್ತು.
ಕೇರಳದ ಇಡುಕ್ಕಿ ಜಿಲ್ಲೆಯವರಾದ ಸಾಜನ್ ಪ್ರಕಾಶ್ ಈಗಾಗಲೇ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಆರು ರಾಷ್ಟ್ರೀಯ ದಾಖಲೆಗಳು ಇವರ ಹೆಸರಿನಲ್ಲಿದೆ. ಈ ಹಿಂದೆ ರೇಹಾನ್ ಪೂಂಚ, ಆರೋನ್ ಡಿಸೋಜಾ ಒಲಿಂಪಿಕ್ ಬಿ ಸ್ಟಾಂಡರ್ಡ್ ಮಟ್ಟವನ್ನು ಮುಟ್ಟಿ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದರು. ಈಗ ಸಾಜನ್ ಪ್ರಕಾಶ್ ಎ ಸ್ಟಾಂಡರ್ಡ್ ಮಟ್ಟ ಮುಟ್ಟಿ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ.
ಇನ್ನು ಸಾಜನ್ ಪ್ರಕಾಶ್ ಸತತ ಎರಡು ಬಾರಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಪಟವಾಗಿದ್ದು ಕಳೆದ ಸಲ ಬಿ ಸ್ಟಾಂಡರ್ಡ್ ಟೈಮಿಂಗ್ ಮಟ್ಟವನ್ನು ಮುಟ್ಟಿದ ಅವರು ಈ ಬಾರಿ ಎ ಸ್ಟಾಂಡರ್ಡ್ ಮುಟ್ಟಿ ಎಂಟ್ರಿ ಪಡೆದಿದ್ದಾರೆ.
ಅಂದ ಹಾಗೆ ಸಾಜನ್ ಕೇರಳ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Discussion about this post