2018ರಲ್ಲಿ ಯೂ ಟರ್ನ್ ಚಿತ್ರದ ಬಳಿಕ ಮತ್ಯಾವುದೇ ಕನ್ನಡ ಚಿತ್ರವನ್ನು ಪವನ್ ಕುಮಾರ್ ನಿರ್ದೇಶಿಸಿರಲಿಲ್ಲ. ಇದೀಗ ಪುನೀತ್ ರಾಜ್ ಕುಮಾರ್ ಅವರಿಗಾಗಿ ಕಥೆ ಸಿದ್ದಮಾಡಿಕೊಂಡು ಬಂದಿರುವ ಪವನ್ ‘ದ್ವಿತ್ವ’ ಪ್ರಾಜೆಕ್ಟ್ ಅನ್ನು ಘೋಷಿಸಿದ್ದಾರೆ.
2018ರ ಬಳಿಕ ನೆಟ್ ಫ್ಲೆಕ್ಸ್ ಗಾಗಿ ವೆಬ್ ಸೀರಿಸ್ ಅನ್ನು ಮಾಡಿಕೊಟ್ಟ ಅವರು, ತೆಲುಗಿನಲ್ಲೂ ವೆಬ್ ಸೀರಿಸ್ ಪ್ರಾಜೆಕ್ಟ್ ಮುಗಿಸಿದ್ದಾರೆ. ಇದಾದ ಬಳಿಕ ‘ದ್ವಿತ್ವ’ ವನ್ನು ಕೈಗೆತ್ತಿಕೊಂಡಿದ್ದಾರೆ. ಹೀಗಾಗಿಯೇ ದೊಡ್ಡ ಗ್ಯಾಪ್ ಬಳಿಕ ಪವನ್ ಈ ಸಿನಿಮಾವನ್ನು ಕೈಗೆತ್ತಿಕೊಂಡಿರುವುದರಿಂದ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದೆ.
ಇನ್ನು ಪವನ್ ಈ ಹಿಂದೆ ಮನಸಾರೆ ಅನ್ನುವ ಸಿನಿಮಾದ ಕಥೆ ಬರೆದಿದ್ದರು. ಪಂಚರಂಗಿ ಸಿನಿಮಾದ ಕಥೆಯೂ ಅವರದ್ದೇ. ಇದಾದ ಬಳಿಕ ಲೈಫು ಇಷ್ಟೇನೆ ಅನ್ನುವ ಸಿನಿಮಾಗೆ ಕಥೆ ಬರೆದು ನಿರ್ದೇಶಿಸದ ಅವರು ಲೂಸಿಯಾ ಹಾಗೂ ಯೂ ಟರ್ನ್ ಸಿನಿಮಾವನ್ನು ಮುಗಿಸಿದ್ದರು.
ಪವನ್ ಅವರ ಇಷ್ಟು ಸಿನಿಮಾಗಳ ಕಥೆ ಎಲ್ಲವೂ ಡಿಫರೆಂಟ್ ಸ್ಟೋರಿಗಳು ಅದರೂ ಎಲ್ಲೋ ಒಂದು ಕಡೆ ಸೈಕಲಾಜಿಕಲ್ ಕಥಾಹಂದರವನ್ನು ಬಹುತೇಕ ಸಿನಿಮಾಗಳು ಹೊಂದಿತ್ತು. ಹೀಗಾಗಿಯೇ ‘ದ್ವಿತ್ವ’ ಬಗ್ಗೆ ಕುತೂಹಲವಿದೆ.
ಮಾಹಿತಿಗಳ ಪ್ರಕಾರ ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್ ಕಥೆಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಇನ್ನು ‘ದ್ವಿತ್ವ’ ಅಂದ್ರೆ ಎರಡು ಬಗೆ ಅನ್ನುವ ಅರ್ಥ ಇರುವುದರಿಂದ ಸೈಕಲಾಜಿಕಲ್ ಕಥೆಯೇ ಹೊಂದಿದೆ ಅನ್ನುವುದರಲ್ಲಿ ಅನುಮಾನವಿಲ್ಲ.
ಇನ್ನು ವಿಶೇಷ ಅಂದ್ರೆ ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ‘ದ್ವಿತ್ವ’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ.
Discussion about this post