ನವದೆಹಲಿ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಬೆಂಬಲಿಸಿ ಎಂದು ಭಾರತ ಕ್ರಿಕೆಟ್ ತಂಡ ಕಪ್ತಾನ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.
ಈ ಕುರಿತ ವಿಡಿಯೋ ಬಿಸಿಸಿಐ ಟ್ವೀಟರ್ ಖಾತೆಯಲ್ಲಿ ಅಪ್ ಲೋಡ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ಮೊಟ್ಟ ಮೊದಲ ಸಲ 120 ಭಾರತೀಯ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ಶೂಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್ ಹಾಕಿ ಸೇರಿದಂತೆ ವಿವಿಧ 18 ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದ್ದಾರೆ. ಹೀಗಾಗಿಯೇ ಈ ಬಾರಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗುತ್ತಿದೆ. ಒಟ್ಟು 228 ಮಂದಿಯನ್ನು ಭಾರತ ಟೋಕಿಯೋಗೆ ಕಳುಹಿಸಿಕೊಟ್ಟಿದ್ದು ಇದರಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತ ಒಟ್ಟು 6 ಪದಕಗಳನ್ನು ಸಂಪಾದಿಸಿತ್ತು. ಇದರಲ್ಲಿ 2 ಬೆಳ್ಳಿ ಹಾಗೂ 4 ಕಂಚಿನ ಪದಕ ಸೇರಿತ್ತು. ಕಳೆದ ರಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಂದು ಬೆಳ್ಳಿ ಹಾಗೂ ಒಂದು ಕಂಚು ಸೇರಿ ಕೇವಲ ಎರಡು ಪದಕಗಳನ್ನು ಗೆದ್ದಿತ್ತು, ಈ ಬಾರಿ ಹೆಚ್ಚಿನ ಪದಕಗಳು ಭಾರತದ ಮಡಿಲು ಸೇರಲಿದೆ ಅನ್ನುವುದು ಕ್ರೀಡಾಪ್ರೇಮಿಗಳ ನಿರೀಕ್ಷೆ.
Discussion about this post