ಗುಜರಾತ್ : ವಿಶ್ವವನ್ನು ತಲ್ಲಣಗೊಳಿಸಿರುವ ಕೊರೋನಾ ಸೋಂಕಿನ ಎರಡನೇ ಅಲೆ ಇದೀಗ ಭಾರತವನ್ನು ಹಿಂಡಿ ಹಿಪ್ಪೆ ಮಾಡಲಾರಂಭಿಸಿದೆ.
ಮುನ್ನೆಚ್ಚರಿಕೆ ಕೊರತೆಯ ಒಂದೇ ಕಾರಣದಿಂದ ದೊಡ್ಡ ಮಟ್ಟದ ಅಪಾಯವೊಂದನ್ನು ಮೈ ಮೇಲೆ ಎಳೆದುಕೊಳ್ಳಲಾಗಿದೆ. ಪರಿಸ್ಥಿತಿ ನೋಡಿದರೆ 2020 ಮತ್ತೆ ಮರುಕಳಿಸುವಂತೆ ಕಾಣಿಸುತ್ತಿದೆ.
ಈ ನಡುವೆ ಕೊರೋನಾ ಸೋಂಕಿನಿಂದ ತತ್ತರಿಸಿರುವ ಗುಜರಾತ್ ನ ಸೂರತ್ ನಲ್ಲಿ ಸೋಂಕು ನಿಯಂತ್ರಣಕ್ಕೆ ಇನ್ನಿಲ್ಲದ ಸರ್ಕಸ್ ನಡೆಯುತ್ತಿದೆ.
ಕೊರೋನಾ ಸೋಂಕಿತರನ್ನು ಗುರುತಿಸುವ ಸಲುವಾಗಿ ವಿಶಿಷ್ಟ ಕಾರ್ಯಕ್ರಮವನ್ನು ಸ್ಥಳೀಯಾಡಳಿತ ಜಾರಿಗೊಳಿಸಿದೆ.
ಆಟೋರಿಕ್ಷಾ ಚಾಲಕರು, ತರ್ಕಾರಿ ವ್ಯಾಪಾರಿಗಳು ಮತ್ತು ದಿನಸಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಈ ಮೂಲಕ ಜನರೊಂದಿಗೆ ಬೆರೆಯುತ್ತಿರುವ ಮಂದಿಯ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಮಾಡಲಾಗುತ್ತಿದೆ.
ಜೊತೆಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ.
ಈ ನಡುವೆ ಸೂರತ್ ನಲ್ಲಿ ಒಂದೇ ದಿನ 34 ಆಟೋ ರಿಕ್ಷಾ ಚಾಲಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು ಸೋಂಕಿತರ ಸಂಪರ್ಕವನ್ನು ಟ್ರೇಸ್ ಮಾಡುವುದೇ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ : ಪಂಜಾಬ್ ಗೆ ಬ್ರಿಟನ್ ವೈರಸ್ ಕಂಟಕ – ಶೇ 81 ರೂಪಾಂತರಿ ವೈರಸ್ ಪತ್ತೆ
ಹೀಗಾಗಿ ಇದೀಗ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಮನವಿ ಮಾಡಿರುವ ಅಧಿಕಾರಿಗಳು ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.
ಹಾಗಂತ ಸೂರತ್ ನಲ್ಲಿ ನಡೆದ ಘಟನೆ ತಾನೇ ಎಂದು ನಿರ್ಲಕ್ಷ್ಯ ವಹಿಸಬೇಡಿ. ನಾಳೆ ಇದೇ ಪರಿಸ್ಥಿತಿ ಕರ್ನಾಟಕದಲ್ಲೂ ಬರಬಹುದು.
ಈ ಘಟನೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಕರ್ನಾಟಕ ಆರೋಗ್ಯ ಇಲಾಖೆ ನಮ್ಮ ಆಟೋಚಾಲಕರು, ತರಕಾರಿ ವ್ಯಾಪಾರಿಗಳು ಸೇರಿದಂತೆ, ಜನರೊಂದಿಗೆ ಹೆಚ್ಚೆಚ್ಚು ಬೆರೆಯುವ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸುವುದು ಉತ್ತಮ.
Discussion about this post