ವಿಯೆಟ್ನಾಂ ಪ್ರಧಾನಿ ಜತೆ ಮೋದಿ ಮಾತುಕತೆ; ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಕುರಿತು ಚರ್ಚೆ
ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿಂದು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.ಬಳಿಕ ಉಭಯ ನಾಯಕರು ವಿಯೆಟ್ನಾಂನ ನ್ಹಾ ಟ್ರಾಂಗ್ನಲ್ಲಿನ ಸೇನಾ ಸಾಫ್ಟ್ ವೇರ್ ಪಾರ್ಕ್ ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಭಾರತ ಈ ಯೋಜನೆಗೆ ಐದು ದಶಲಕ್ಷ ಡಾಲರ್ ಅನುದಾನ ನೀಡಿದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣ, ಕಡಲ ಪರಂಪರೆ, ಔಷಧೀಯ ಸಸ್ಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಭಾರತ-ವಿಯೆಟ್ನಾಂ ಒಪ್ಪಂದಗಳಿಗೆ ಸಹಿ ಹಾಕಿದವು.ರೇಡಿಯೋ ಮತ್ತು ದೂರದರ್ಶನದಲ್ಲಿ ಸಹಕಾರಕ್ಕಾಗಿ ಪ್ರಸಾರ ಭಾರತಿ ಮತ್ತು ವಾಯ್ಸ್ ಆಫ್ ವಿಯೆಟ್ನಾಂ ಇದೇ ಸಂದರ್ಭದಲ್ಲಿ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡವು.
ಅಲ್ಲದೆ, ಕ್ರೆಡಿಟ್ ಲೈನ್ ಒಪ್ಪಂದ ಮತ್ತು ವಿಯೆಟ್ನಾಂನಲ್ಲಿ ಮೈಸನ್ ವಿಶ್ವ ಪಾರಂಪರಿಕ ತಾಣವನ್ನು ಮರುಸ್ಥಾಪಿಸುವ ಕುರಿತ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತ-ವಿಯೆಟ್ನಾಂ ನಡುವಿನ ಸಂಬಂಧಗಳು ವಿಸ್ತರಿಸಿದ್ದು, ಮತ್ತಷ್ಟು ಗಾಢವಾಗಿವೆ. ಕಳೆದ 10 ವರ್ಷಗಳಲ್ಲಿ, ಸಂಬಂಧಗಳಿಗೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ರೂಪವನ್ನು ನೀಡಲಾಗಿದೆ. ದ್ವಿಪಕ್ಷೀಯ ವಹಿವಾಟು ಶೇಕಡ 85ರಷ್ಟು ಏರಿಕೆ ಕಂಡಿದೆ ಎಂದರು.
ಬೌದ್ಧ ಧರ್ಮವು ನಮ್ಮ ಪಾರಂಪರಿಕ ಪರಂಪರೆಯಾಗಿದ್ದು, ಎರಡೂ ದೇಶಗಳ ಜನರನ್ನು ಆಧ್ಯಾತ್ಮಿಕ ಮಟ್ಟದಲ್ಲಿ ಸಂಪರ್ಕಿಸಿದೆ. ವಿಯೆಟ್ನಾಂನ ಯುವಕರು ನಳಂದಾ ವಿಶ್ವವಿದ್ಯಾಲಯದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಭಾರತ ಬಯಸುತ್ತದೆ.
ಆಕ್ಟ್ ಈಸ್ಟ್ ಪಾಲಿಸಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಯಲ್ಲಿ ವಿಯೆಟ್ನಾಂ, ಭಾರತದ ಪ್ರಮುಖ ಪಾಲುದಾರ ದೇಶವಾಗಿದೆ. ಮುಕ್ತ ನಿಯಮಾಧಾರಿತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ಗಾಗಿ ಭಾರತ-ವಿಯೆಟ್ನಾಂ ಸಹಕಾರ ಮುಂದುವರಿಯುತ್ತದೆ ಎಂದರು. ‘ವಿಕಸಿತ ಭಾರತ- 2047’ರ ದೃಷ್ಟಿ ಮತ್ತು ವಿಯೆಟ್ನಾಂನ 2045ರ ಆಶಯದಿಂದ ಎರಡೂ ದೇಶಗಳಲ್ಲಿ ಅಭಿವೃದ್ಧಿಯು ವೇಗ ಪಡೆದುಕೊಂಡಿದೆ. ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹೊಸ ಕ್ರಿಯಾ ಯೋಜನೆಯನ್ನು ಎರಡೂ ದೇಶಗಳು ರೂಪಿಸಿವೆ. ರಕ್ಷಣೆ ಮತ್ತು ಭದ್ರತಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
300 ದಶಲಕ್ಷ ಡಾಲರ್ ಕ್ರೆಡಿಟ್ ಲೈನ್ನಲ್ಲಿ ಮಾಡಿಕೊಂಡ ಒಪ್ಪಂದ, ವಿಯೆಟ್ನಾಂನ ಕಡಲ ಭದ್ರತೆಯನ್ನು ಬಲಪಡಿಸುತ್ತದೆ. ಭಯೋತ್ಪಾದನೆ ನಿಗ್ರಹ ಮತ್ತು ಸೈಬರ್ ಭದ್ರತೆಯ ವಿಷಯದಲ್ಲಿ ಸಹಕಾರಕ್ಕೆ ಒತ್ತು ನೀಡಲು ಉಭಯ ದೇಶಗಳು ನಿರ್ಧರಿಸಿವೆ. ಎಂದರು.ಇದಕ್ಕೂ ಮುನ್ನ ಭಾರತ ಭೇಟಿಯಲ್ಲಿರುವ ಮಿನ್ ಚಿನ್ ಅವರಿಗೆ ರಾಷ್ಟ್ರಪತಿ ಭವನದಲ್ಲಿಂದು ಸಾಂಪ್ರದಾಯಿಕ ಸ್ವಾಗತ ಕೋರಿದರು.
Speaking at the Vietnam-India Business Forum, Pham Minh Chinh invited Indian businesses to invest in strategic sectors such as infrastructure, digital technology, and pharmaceuticals in his country.