ವಗ್ಗ ನಿವಾಸಿ ಪ್ರಕಾಶ್ ಆಚಾರ್ಯ ಚಿನ್ನದ ಕೆಲಸ ಮಾಡಿ ಜೀವನ ಸಾಗಿಸುವವರಾಗಿದ್ದು, ಇಡೀ ಕುಟುಂಬಕ್ಕೆ ಇವರ ಉದ್ಯೋಗವೇ ಆಧಾರವಾಗಿತ್ತು.
ಗುರುವಾರ ಬೆಳಗ್ಗೆ ಬಂಟ್ವಾಳ ಪೇಟೆಯ ಗ್ರಾಹಕರೊಬ್ಬರಿಗೆ 50 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ತಲುಪಿಸಬೇಕಾಗಿತ್ತು.
ಹೀಗೆ ವಗ್ಗದಿಂದ ಹೊರಟ ಪ್ರಕಾಶ್ ಆಚಾರ್ಯ ಅದೆಲ್ಲೋ ದಾರಿ ನಡುವೆ ಚಿನ್ನದ ಸರವಿದ್ದ ಬ್ಯಾಗ್ ಕಳೆದುಕೊಂಡಿದ್ದರು. ವಿಷಯದ ಗೊತ್ತಾದ ವೇಳೆ ಆಕಾಶವೇ ಕಳಚಿ ಬಿದ್ದ ಅನುಭವ, ಚಿನ್ನದ ಸರ ಸಿಕ್ರೆ ಸಾಕು ಎಂದು ಬೇಡಿಕೊಳ್ಳದ ದೇವರಿಲ್ಲ.
ಈ ವೇಳೆ ಪ್ರಕಾಶ್ ಆಚಾರ್ಯ ಅವರಿಗೆ ದೇವರ ಸ್ವರೂಪದಲ್ಲಿ ಬಂದವರು ಆಟೋ ಚಾಲಕ ಉಮೇಶ್ ಸುವರ್ಣ.
ವಗ್ಗ ನಿವಾಸಿ ಆಟೋ ರಿಕ್ಷಾ ಚಾಲಕ ಉಮೇಶ್ ಬಾಡಿಗೆಗೆ ತೆರಳಿದ ವೇಳೆ ಬಡಗುಂಡಿ ಸಮೀಪ ಒಂದು ಬ್ಯಾಗ್ ಸಿಕ್ಕಿತ್ತು. ಅನುಮಾನದಿಂದ ಪರಿಶೀಲನೆ ನಡೆಸಿದ್ರೆ ಅದರಲ್ಲಿ ಕರಿಮಣಿ ಸರವಿರುವುದು ಗೊತ್ತಾಗಿದೆ.
ತಕ್ಷಣ ಬ್ಯಾಗ್ ನಲ್ಲಿ ಸಿಕ್ಕ ದಾಖಲೆಯನ್ನು ಆಧರಿಸಿ ಅತ್ಯಂತ ಜಾಗರೂಕತೆಯಿಂದ ಪ್ರಕಾಶ್ ಆಚಾರ್ಯರಿಗೆ ಹಿಂತಿರುಗಿಸಿದ್ದಾರೆ.
ಉಮೇಶ್ ಸುವರ್ಣ ಕಾರ್ಯಕ್ಕೆ ಇದೀಗ ಪ್ರಶಂಸೆ ವ್ಯಕ್ತವಾಗಿದೆ.