ಟಗರು ಡಾಲಿ ಖ್ಯಾತಿಯ ಧನಂಜಯ್ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಡಾಲಿ ಡೇ ಎಂದು ಆಚರಿಸಲು ನಿರ್ಧರಿಸಿದ್ದರು.
ಆದರೆ ಇದನ್ನು ನಯವಾಗಿ ತಿರಸ್ಕರಿಸಿದ ಡಾಲಿ ಅಡಂಭರದ ಹುಟ್ಟು ಹಬ್ಬ ಬೇಡ, ಕೊಡಗಿನ ಜನತೆ ಸಂಕಷ್ಟದಲ್ಲಿದ್ದಾರೆ ಅವರ ನೆರವಿಗೆ ಧಾವಿಸೋಣ ಎಂದು ಕರೆ ಕೊಟ್ಟರು.
ನಿನ್ನೆ ರಾತ್ರಿಯೇ ಜಯನಗರ ಬಳಿ ಇರುವ ಶಾಲಿನಿ ಮೈದಾನಕ್ಕೆ ಆಗಮಿಸಿದ ಧನಂಜಯ್ ಅವರ ನೂರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರಿದರು. ಕೈಲಾದ ದೇಣಿಗೆಯನ್ನು ಕೊಟ್ಟರು. ಇನ್ನು ಸೆಲ್ಫಿಗೊಂದು ಕಾಣಿಕೆ ಅನ್ನುವಂತೆ ಕಾಸು ಕಲೆಕ್ಟ್ ಮಾಡಿದ ಧನಂಜಯ್, ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿಸಿದರು.
ಇನ್ನು ಅಭಿಮಾನಿಗಳು ಡಾಲಿ ಡೇ ಆಚರಿಸಲು ಸಿದ್ದರಾಗುತ್ತಿದ್ದಾರೆ ಅನ್ನುವ ಸಂದರ್ಭದಲ್ಲಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಹಾಕಿದ್ದ ಧನಂಜಯ್ “ಎಲ್ಲರಿಗೂ ನಮಸ್ಕಾರ, ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣ ಗಮನಿಸುತ್ತಿದ್ದೇನೆ. 22ರ ರಾತ್ರಿ ಹಾಗೂ 23 ರಂದು ಅಭಿಮಾನಿಗಳು 23ರಂದು ಡಾಲಿ ಡೇ ಆಚರಿಸಲು ಸಿದ್ದರಾಗುತ್ತಿದ್ದಾರೆ. ಆದರೆ ಡಾಲಿ ಡೇ ಗೆ ಇದು ಸರಿಯಾದ ಸಮಯವಲ್ಲ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಕೇರಳ ಮತ್ತು ಕೊಡಗಿನಲ್ಲಿ ಆಗುತ್ತಿರುವುದು ನೋಡಿದ ಮೇಲೂ ಸಂಭ್ರಮದ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವ ಸಮಯ. ಡಾಲಿ ಡೇ ಗೆ ಅರ್ಥ ಕೊಡಬೇಕಾದರೆ ನನ್ನನ್ನು ಭೇಟಿ ಮಾಡಬಹುದು. ಆ ದಿನ ನಿಮ್ಮ ಕೈಲಾದಷ್ಟು ಅಂದರೆ 5 ರೂ., 10 ರೂ. ನೀಡಿ. ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿ ತಂದು ಹಣ ವ್ಯರ್ಥ ಮಾಡುವುದರ ಬದಲು ನಿಮ್ಮ ಕೈಲಾದಷ್ಟು ನೀವು ದಾನ ಮಾಡಿ, ನನ್ನ ಕೈಲಾದಷ್ಟು ನಾನು ದಾನ ಮಾಡುತ್ತೇನೆ. ಎಂದು ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಅಭಿಮಾನಿಗಳು ನೆಚ್ಚಿನ ನಟನನ್ನು ಭೇಟಿಯಾಗಿ ದೇಣಿಗೆ ಸಲ್ಲಿಸಿದರು. ಮತ್ತೆ ಕೆಲವರು ಹಲವು ವಸ್ತುಗಳನ್ನು ತಂದುಕೊಟ್ಟರು. ಕೊಟ್ಟ ದೇಣಿಗೆಯ ಮೊತ್ತ ಚಿಕ್ಕದಾಗಿರಬಹುದು, ಆದರೆ ನೆಚ್ಚಿನ ನಟನ ಕರೆಗೆ ಸ್ಪಂದಿಸಿದ ಅಭಿಮಾನಿಗಳು ನಿಜಕ್ಕೂ ಗ್ರೇಟ್.
Discussion about this post