ದೇವರನಾಡಿನಲ್ಲಿ ಸುರಿಯುತ್ತಿರುವ ಮಳೆ ನೋಡಿದರೆ ದೇವರೇ ಮುನಿದುಕೊಂಡನೇ ಅನ್ನುವಂತಿದೆ. ಆಣೆ ಕಟ್ಟುಗಳು ತುಂಬಿ ಹೋಗಿದೆ. ಕೆರೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಲು ಜಾಗವೇ ಇಲ್ಲದಂತಾಗಿದೆ. ನೀರಿನ ಹೊಡೆತ ತಾಳಲಾರದೇ ಗುಡ್ಡಗಳು ಕುಸಿದು ಬೀಳುತ್ತಿದೆ.
ವರುಣನ ಅಬ್ಬರಕ್ಕೆ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೇ ಏರುತ್ತಿದೆ. ಇದೀಗ 37ರ ಗಡಿ ದಾಟಿದೆ. ಈ ನಡುವೆ ನಾಯಿಯೊಂದು ಅನ್ನ ಹಾಕಿದ ಮನೆ ಮಂದಿಯನ್ನು ರಕ್ಷಿಸಿದ ಸುದ್ದಿಯೊಂದು ಬಂದಿದೆ.
ಅದು ಅಗಸ್ಟ್ ತಿಂಗಳ 9. ಇಡುಕ್ಕಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಏನಾಗುತ್ತಿದೆ, ಏನಾಗಲಿದೆ ಅನ್ನುವುದನ್ನು ಊಹಿಸಲು ಸಾಧ್ಯವಿರಲಿಲ್ಲ.ರಕ್ಷಣಾ ಸಿಬ್ಬಂದಿ, ಜಿಲ್ಲಾಡಳಿತ ಅಪಾಯದಲ್ಲಿದ್ದ ಜನರ ಸಹಾಯಕ್ಕೆ ಧಾವಿಸಲು ಸನ್ನದ್ಧರಾಗಿ ನಿಂತಿದ್ದರು.
ಮುಂಜಾನೆ 3 ಗಂಟೆಯ ಸಮಯಕ್ಕೆ ಇಡುಕ್ಕಿಯ ಕಂಜಿಕುಝಿ ಗ್ರಾಮದ ಮೋಹನನ್ ಅವರ ಮನೆಯ ನಾಯಿ ಜೋರಾಗಿ ಬೊಗಳಲು ಪ್ರಾರಂಭಿಸಿದೆ. ಎಚ್ಚರಗೊಂಡ ಮನೆ ಮಾಲೀಕ ಮಳೆ ಬರುತ್ತಿದೆ ಹೀಗಾಗಿ ಬೊಗಳುತ್ತಿದೆ ಎಂದು ಮತ್ತೆ ಮಲಗಿದ್ದಾರೆ. ಆದರೆ ರಾಕಿ ಬೊಗಳುವುದನ್ನು ನಿಲ್ಲಿಸಲಿಲ್ಲ. ಮತ್ತಷ್ಟು ಜೋರಾಗಿ ಬೊಗಳತೊಡಗಿತು. ಮಾತ್ರವಲ್ಲದೆ ಉಳಿಡಲು ಪ್ರಾರಂಭಿಸಿದ್ದಾರೆ.
ರಾಕಿ ಯಾವತ್ತೂ ಹೀಗೆ ಉಳಿಟ್ಟವನಲ್ಲ, ಏನೋ ಅಪಾಯ ಎಂದು ಮೋಹನನ್ ಹೊರಗೆ ಬಂದಿದ್ದಾರೆ. ನೋಡಿದರೆ ಮನೆ ಪಕ್ಕದ ಗುಡ್ಡದ ಕಡೆ ನೋಡಿ ನಾಯಿ ಬೊಗಳುತ್ತಿತ್ತು. ಜೊತೆಗೆ ಗುಡ್ಡ ನಿಧಾನವಾಗಿ ಸರಿಯುತ್ತಿರುವುದು ಗಮನಕ್ಕೆ ಬಂತು. ಮನೆಯೊಳಗಿನ ಸಾಮಾಗ್ರಿ ತರುವಷ್ಟು ಸಮಯವಿರಲಿಲ್ಲ. ಜೀವ ಉಳಿದರೆ ಸಾಕು ಎಂದು ದೂರ ಸರಿದು ನಿಂತರು. ಕಷ್ಟ ಪಟ್ಟು ಕಟ್ಟಿದ ಮನೆ ಮೇಲೆ ಕಣ್ಣ ಮುಂದೆ ಗುಡ್ಡ ಕುಸಿದು ಬಿತ್ತು.
ಇದೀಗ ಜೀವವುಳಿಸಿದ ರಾಕಿ ಜೊತೆ ಮೋಹನನ್ ಕುಟುಂಬ ನಿರಾಶ್ರಿತರ ಕೇಂದ್ರ ಸೇರಿದೆ. ಮಳೆ ನಿಲ್ಲುವ ತನಕ ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರದಿಂದ ಸಿಗುವ ಪರಿಹಾರದ ಮೇಲೆ ಎಲ್ಲವೂ ನಿಂತಿದೆ.