ಎರಡು ರಾಜ್ಯಗಳಲ್ಲಿ ಬಿಜೆಪಿ ಖಾತೆ ತೆರೆದರೆ ಅದು ದೊಡ್ಡ ಸಾಧನೆಯಾಗಲಿದೆ
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಬಾರಿಯಾದರೂ ನರೇಂದ್ರ ಮೋದಿಯವರನ್ನು ಸೋಲಿಸಿ ದೆಹಲಿ ಗದ್ದುಗೆ ಹಿಡಿಯವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿದೆ. ಆದರೆ ಕೈ ಪಾಳಯದ ಆಸೆಗೆ ಇದೀಗ ಚುನಾವಣೋತ್ತರ ಸಮೀಕ್ಷೆಗಳು ತಣ್ಣೀರು ಎರಚಿದೆ.
ದೇಶದಲ್ಲಿ 7 ಹಂತದ ಚುನಾವಣೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಸತತ 3ನೇ ಬಾರಿಗೆ ಮೋದಿಯವರ ನೇತೃತ್ವದ NDA ಮೈತ್ರಿಕೂಟ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಅಂದಿದೆ. ಈ ಸಮೀಕ್ಷೆಗಳ ಅಸಲಿತನ ಜೂನ್ 4 ರ ಸಂಜೆ ಗೊತ್ತಾಗಲಿದೆ.
ಈ ನಡುವೆ ಕೇರಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವ ಬಗ್ಗೆ ಸಮೀಕ್ಷೆಗಳು ಮುನ್ಸೂಚನೆ ಕೊಟ್ಟಿದೆ. ಒಂದು ವೇಳೆ ಈ ರಾಜ್ಯಗಳಲ್ಲಿ ಬಿಜೆಪಿ ಖಾತೆ ತೆರೆದರೆ ದಕ್ಷಿಣ ಭಾರತದ ಮಟ್ಟಿಗೆ ಬಿಜೆಪಿ ದೊಡ್ಡ ಸಾಧನೆ ಮಾಡಿದಂತಾಗುತ್ತದೆ. ಜೊತೆಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಮಾಡಿದ ಪ್ರಯೋಗ ಫಲ ನೀಡಿದಂತಾಗುತ್ತದೆ.
ಕೇರಳದಲ್ಲಿರುವ 20 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 15 ರಿಂದ 18 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ.
ಅಧಿಕಾರರೂಢ ಎಲ್.ಡಿ.ಎಫ್ ಬಲ ವೃದ್ಧಿಸಿಕೊಳ್ಳುವ ಸೂಚನೆ ಸಿಕ್ಕಿದ್ದು, ಅಚ್ಚರಿ ಅನ್ನುವಂತೆ ಕೇರಳದಲ್ಲಿ ಬಜೆಪಿ ಖಾತೆ ತೆರೆಯಲಿದೆ. ಬಿಜೆಪಿ 1 ರಿಂದ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ತಿರುವನಂತಪುರದಲ್ಲಿ ಕಣಕ್ಕಿಳಿದಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗೆಲ್ಲುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ನ ಶಶಿ ತರೂರ್ ಅವರು ಸೋಲುವ ಸಾಧ್ಯತೆಗಳಿದೆಯಂತೆ. ಇಲ್ಲಿ ಎಡರಂಗದಿಂದ ಅನ್ನೀ ರಾಜಾ ಅವರು ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆಯ ಕಾರಣ ಕಾಂಗ್ರೆಸ್ ಸೋಲು ಕಾಣಲಿದೆ ಅನ್ನಲಾಗಿದೆ.
ಇನ್ನುಳಿದಂತೆ ತ್ರಿಶೂರ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುರೇಶ್ ಗೋಪಿ ಗೆಲ್ಲುತ್ತಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದೆ.
ಇನ್ನು ಅಟ್ಟಿಂಗಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಸಚಿವ ವಿ ಮುರಳೀಧರನ್ ಗೆಲ್ಲುವ ಸಾಧ್ಯತೆಗಳಿದೆಯಂತೆ. ಅಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ಅಡೂರು ಪ್ರಕಾಶ್ ಹಾಗೂ CPIM ನಿಂದ ವಿ. ಜಾಯ್ ಅವರ ಕಣದಲ್ಲಿದ್ದಾರೆ. ವಿ. ಮುರಳೀಧರನ್ ಇಲ್ಲಿ ಸಾಕಷ್ಟು ಸಿದ್ದತೆಗಳೊಂದಿಗೆ ಚುನಾವಣೆ ಎದುರಿಸುತ್ತಿರುವ ಕಾರಣ ಗೆಲುವು ಖಚಿತ ಅನ್ನಲಾಗಿದೆ.
ಇನ್ನು ತಮಿಳುನಾಡಿನಲ್ಲೂ ಬಿಜೆಪಿ ಖಾತೆ ತೆರೆಯೋ ಸಾಧ್ಯತೆಗಳಿದ್ದು, ಅಣ್ಣಾಮಲೈ ಅವರ ತಂತ್ರಗಾರಿಕೆ ಫಲ ನೀಡಲಿದೆಯಂತೆ. ಜೊತೆಗೆ ಕೊಯಂಬತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈ ಗೆಲ್ಲುತ್ತಾರೆ ಎಂದು ಸಮೀಕ್ಷೆಗಳು ಹೇಳಿವೆ.
Discussion about this post