ರಕ್ಷಿತ್ ಶೆಟ್ಟಿಯ ಬಹು ನಿರೀಕ್ಷಿತ ಚಿತ್ರ ‘ಅವನೇ ಶ್ರೀಮನ್ನಾರಾಯಣ’ ದ ಬಿಡುಗಡೆಯ ಡೇಟ್ ಫಿಕ್ಸ್, ಡಿಸೆಂಬರ್ 27ಕ್ಕೆ ತೆರೆಗೆ ಬರುವುದಾಗಿ ಹೇಳಿದ ರಕ್ಷಿತ್
ಸ್ಯಾಂಡಲ್ ವುಡ್ ನಲ್ಲಿ ಬಹುದಿನಗಳ ನಂತರ ರಕ್ಷಿತ್ ತೆರೆಗೆ ಬರಲು ಸಜ್ಜಾಗಿದ್ದಾರೆ.
ಕಿರಿಕ್ ಪಾರ್ಟಿ ಯಶಸ್ವಿ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಈಗ ಮತ್ತೆ ‘ಅವನೇ ಶ್ರೀಮನ್ನಾರಾಯಣ’ ಎನ್ನುತ್ತಾ ಪ್ರೇಕ್ಷಕರ ಮುಂದೆ ಬರುತಿದ್ದಾರೆ.
ರಕ್ಷಿತ್ ರ ಬಹು ನಿರೀಕ್ಷಿತ ಚಿತ್ರವಾಗಿರುವ ಶ್ರೀಮನ್ನಾರಾಯಣ ಚಿತ್ರೀಕರಣ ಪ್ರಾರಂಭವಾದಾಗಿನಿಂದ ಕುತೂಹಲ ಮೂಡಿಸುತ್ತಿದೆ. ರಕ್ಷಿತ್ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಚಿತ್ರವು ತನ್ನ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿಕೊಂಡಿದೆ.
ರಕ್ಷಿತ್ ರನ್ನು ಹೊಸ ಮ್ಯಾನರಿಸಂನಲ್ಲಿ ನೋಡಬೇಕು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಶ್ರೀಮನ್ನಾರಾಯಣ ವಷಾಂತ್ಯದಲ್ಲಿ ಅಂದರೆ ಡಿಸೆಂಬರ್ 27 ರಂದು ಬೆಳ್ಳಿ ತೆರೆಗೆ ಅಪ್ಪಳಿಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಶ್ರೀಮನ್ನಾರಾಯಣ ಡಿಸೆಂಬರ್ 27 ರಂದು ತೆರೆಗೆ ಬರುತ್ತಿದೆ”, ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಇದೇ ದಿನ ರಕ್ಷಿತ್ ತಮ್ಮ ಹಿಂದಿನ ಯಶಸ್ವಿ ಚಿತ್ರವಾದ ಕಿರಿಕ್ ಪಾರ್ಟಿ ಗೆ ಮೂರು ವರ್ಷಗಳು ತುಂಬುತ್ತವೆ. ಅದೂ ಕೂಡ ಡಿಸೆಂಬರ್ 27 ರಂದು ಬಿಡುಗಡೆಯಾಗಿತ್ತು. ಇದರ ಬಗ್ಗೆಯೂ ರಕ್ಷಿತ್ ಹೇಳಿಕೊಂಡಿದ್ದಾರೆ.
“ನಾವು ಕಿರಿಕ್ ಪಾರ್ಟಿಯ ಮೂರು ವರ್ಷಗಳ ಸಂಭ್ರಮವನ್ನು ಆಚರಿಸಲಿದ್ದೇವೆ”, ಎಂದು ಬರೆದುಕೊಂಡಿದ್ದಾರೆ.
ಸಚಿನ್ ರವಿ ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಶ್ರೀಮನ್ನಾರಾಯಣ ಈ ಮುನ್ನ ನವೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು.
80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮನ್ನಾರಾಯಣ ಚಿತ್ರಕ್ಕೆ ಪುಷ್ಕರ ಮಲ್ಲಿಖಾರ್ಜುನಯ್ಯ ಮತ್ತು ಎ ಕೆ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ರಾಗ ಸಂಯೋಜನೆ ಮಾಡಿದ್ದಾರೆ.
ಶ್ರೀಮನ್ನಾರಾಯಣ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿ ಕಥೆಯಾಗಿದೆ. ಕರ್ಮ್ ಚಾವ್ಲಾ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.
ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ತಾರಾಗಣದಲ್ಲಿದ್ದಾರೆ.
Discussion about this post