ಬೆಂಗಳೂರು : ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಪಬ್ಲಿಕ್ ಟಿವಿ ವಿರುದ್ಧ ಗರಂ ಆಗಿದ್ದಾರೆ. ತನಗಾಗುತ್ತಿರುವ ಅನ್ಯಾಯದ ವಿರುದ್ಧ ತೊಡೆತಟ್ಟಿರುವ ಅವರು ಜುಲೈ 11ಕ್ಕೆ ಕಾದು ನೋಡಿ ಅಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ನಿಮ್ಮ ಬಳಿ ಇರುವ ಅಸ್ತ್ರ TRPಗೋಸ್ಕರ ನಡೆಸುತ್ತಿರುವ ಒಂದು ನ್ಯೂಸ್ ಚಾನೆಲ್. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ.
ನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲಾ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇಕಡ 90ರಷ್ಟು ಜನ ಇಂದಿಗೂ ನನ್ನ ಜೊತೆಯಲ್ಲೇ ಇರುವರು. ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ.
ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೇನೆ ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೇನೆ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್ ಆಫಿಸರ್ ರಿಂದ ಹಿಡಿದು, ಟೆಕ್ನಿಶಿಯನ್ಸ್, ಡೈರೆಕ್ಟರ್ಸ್ ಹಾಗೂ ಪ್ರತಿಯೊಬ್ಬ ಪ್ರೊಡ್ಯುಸರ್ ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲೂ ಮಾತನಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ
ಹಾಗಂತ ನಿಜ ಸುಳ್ಳಾಗಲ್ಲ. ಪಬ್ಲಿಕ್ ಟಿವಿಯವರು ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾನು ಎಲ್ಲಾ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎಂಬ ನಂಬಿಕೆ ಇತ್ತು.
ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು, ಮಾಧ್ಯಮದ ನೈತಿಕ ಜವಾಬ್ದಾರಿಗಳನ್ನು ಮರೆತು, ವೈಯುಕ್ತಿಕ ದಾಳಿ ನಡೆಸಿ, ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ
ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ, ಆದರೆ ಹತ್ತು ದಿನಗಳ ಬಳಿಕ. ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು, ಯಾವ ಯಾವ ಸತ್ಯ ಹೊರಗೆ ಬರುತ್ತದೋ, ಅವರವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೊಡುತ್ತೇನೆ. ನನ್ನ ಉತ್ತರ July 11ರಂದು, ಕಾದು ನೋಡಿ, Truth is mighty and must prevail.
ನನ್ನ ಎಲ್ಲಾ ಏಳು ಬೀಳುಗಳಲ್ಲಿ ನನ್ನ ಜೊತೆಗಿದ್ದ ನನ್ನ ಆತ್ಮೀಯರಿಗೂ, ಹಿತೈಷಿಗಳಿಗೂ, ಅಭಿಮಾನಿ ಬಳಗಕ್ಕೂ” ಎಂದು ರಕ್ಷಿತ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
Discussion about this post