ಮದುವೆಯಾಯಿತಂತೆ ಎಂದು ಪ್ರಣೀತಾ ಸುಭಾಷ್ ಗೆ ಕರೆ ಮಾಡಿ ಕೇಳಿದ್ರೆ ಇಲ್ಲ, ಆಗೋ ಸಂದರ್ಭದಲ್ಲಿ ಹೇಳ್ತಿನಿ ಎಂದು ಕಾಗೆ ಹಾರಿಸಿದ್ದರು. ಮದುವೆ ಸುದ್ದಿ ನಿಜವೇ ಎಂದು ಸುದ್ದಿ ದೃಢಪಡಿಸೋಣ ಅಂತ ಕರೆ ಮಾಡಿದ್ರೆ ನೋ..ನೋ..ನೋ ಅವೆಲ್ಲಾ ಸುಳ್ಳು ಸುದ್ದಿ ಅಂದಿದ್ದಾರೆ.
ಆದರೆ ಯಾವಾಗ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡ್ತೋ ತಾವು ಮದುವೆಯಾಗಿರುವ ಸುದ್ದಿಯನ್ನು ಪ್ರಣೀತಾ ಅವರೇ ದೃಢಪಡಿಸಿದ್ದಾರೆ. ತಮ್ಮದೇ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕ್ಷಮೆಯಾಚನೆಯ ಪತ್ರವೊಂದನ್ನು ಬರೆದು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಈ ನಡುವೆ ಪ್ರಣೀತಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಿಂದಿ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಅನೇಕ ಮಂದಿ ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಈ ನಡುವೆ ಮೋಹಕ ತಾರೆ, ಮಂಡ್ಯದ ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯ ಕೂಡಾ ಪ್ರಣೀತಾ ಅವರಿಗೆ ವಿವಾಹದ ಶುಭಾಶಯ ಕೋರಿದ್ದಾರೆ. ಅಷ್ಟೇ ಸಾಕಿತ್ತು, ಪ್ರಣೀತಾ ಅವರನ್ನು ಫಾಲೋ ಮಂದಿಯೆಲ್ಲಾ ರಮ್ಯ ಬೆನ್ನು ಹತ್ತಿದ್ದಾರೆ.
ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಇನ್ನೂ ಮಜಾ ಅಂದ್ರೆ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ಸಹಾಯಕ್ಕೆ ಧಾವಿಸಿದ್ದು, ಅವೆಲ್ಲಾ ಅವರ ಖಾಸಗಿ ವಿಚಾರ ನಿಮಗ್ಯಾಕೆ ಅದರ ಉಸಾಬರಿ ಎಂದು ಪ್ರಶ್ನಿಸಿದ್ದಾರೆ.
Discussion about this post