ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆ ತಡೆಯುವ ನಿಟ್ಟಿನಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ದಿಢೀರ್ ಎಂದು ಕೊರೋನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಯಾವುದೇ ಮುನ್ಸೂಚನೆ ನೀಡದೆ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಬಹುತೇಕ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಎರಡು ಮೂರು ವಾರಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ. ಆದರೆ ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ದಿಢೀರ್ ತೀರ್ಮಾನಗಳನ್ನು ಕೈಗೊಂಡಿದೆ.
ಸರ್ಕಾರದ ಈ ತೀರ್ಮಾನದ ನೇರ ಹೊಡೆತ ಬಿದ್ದಿರುವುದು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಮೇಲೆ. ಕೊರೋನಾ ಕಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಚಿತ್ರತಂಡ ಹೇಗೋ ಕಷ್ಟ ಪಟ್ಟು ಸಿನಿಮಾ ಬಿಡುಗಡೆ ಮಾಡಿತ್ತು.
ನಿನ್ನೆಯಷ್ಟೇ ಸಿನಿಮಾ ಬಿಡುಗಡೆಯಾಗಿ ಇನ್ನೇನು ಹಾಕಿದ ಬಂಡವಾಳ ಬರಲಾರಂಭಿಸಿದೆ ಅನ್ನುವಷ್ಟು ಹೊತ್ತಿಗೆ ಶೇ50 ರಷ್ಟು ಸೀಟುಗಳನ್ನು ಭರ್ತಿ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಯುವರತ್ನ ಸಿನಿಮಾವನ್ನು ಕೊಲೆ ಮಾಡುವ ಪ್ರಯತ್ನವೊಂದು ಸದ್ದಿಲ್ಲದೆ ನಡೆದಿದೆ.
ಮಜಾ ಅಂದ್ರೆ ಕಳೆದ ತಿಂಗಳು ಬಿಬಿಎಂಪಿ ಆಯುಕ್ತರು ಚಿತ್ರಮಂದಿರಗಳಲ್ಲಿ ಶೇ50ರಷ್ಟು ಸೀಟುಗಳಲ್ಲಿ ಮಾತ್ರ ಅವಕಾಶ ಕೊಡಿ ಎಂದು ಸಿಎಂ ಅವರಿಗೆ ಶಿಫಾರಸು ಮಾಡಿದ್ದರು. ಆಗ ಚಂದನವನದ ಆಕ್ರೋಶದಿಂದ ಗಾಬರಿಗೊಂಡ ಸಿಎಂ, ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಅಂದಿದ್ದರು.
ಆದರೆ ಈಗ ಎಲ್ಲವೂ ಉಲ್ಟಾ. ಕನಿಷ್ಟ ಪಕ್ಷ ಚಂದನವನದ ಮಂದಿಗೊಂದು ಮುನ್ಸೂಚನೆ ಕೊಟ್ಟು ಈ ನಿರ್ಧಾರವನ್ನು ಕೈಗೊಳ್ಳಬಹುದಿತ್ತು. ಯುವರತ್ನ ಸಿನಿಮಾ ಪ್ರಚಾರ ಸಂದರ್ಭದಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆಯಾದ ವೇಳೆ ಪುನೀತ್ ಅವರನ್ನು ಕರೆದು ಎಚ್ಚರಿಸಬಹುದಿತ್ತು.
ಎಚ್ಚರಿಸುವ ನೈತಿಕತೆ ಯಾರಿಗಿದೆ ಹೇಳಿ, ನಮ್ಮ ರಾಜಕಾರಣಿಗಳು ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಚುನಾವಣಾ ಪ್ರಚಾರಗಳನ್ನು ನಡೆಸಿಲ್ವ.
Discussion about this post