ಸೌಮ್ಯ ವಿಶ್ವನಾಥನ್ ಹತ್ಯೆಯ ತೀರ್ಪು ಪ್ರಕಟಗೊಳ್ಳಲು 15 ವರ್ಷಗಳು ಬೇಕಾಯ್ತು ಅಂದ್ರೆ…
ಸೆಪ್ಟೆಂಬರ್ 30, 2008, 25 ವರ್ಷ ವಯಸ್ಸಿನ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರು ಇದು ನನ್ನ ಬದುಕಿನ ಕೊನೆಯ ದಿನ ಎಂದು ಅಂದುಕೊಂಡಿರಲಿಲ್ಲ. ಎಂದಿನಂತೆ ಮತ್ತೊಂದು ದಿನ ಅಂದುಕೊಂಡಿದ್ದರು. ಹೆಡ್‌ಲೈನ್ಸ್ ಟುಡೆಯಲ್ಲಿ ನ್ಯೂಸ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದ ಅವರು ಬ್ರೇಕಿಂಗ್ ನ್ಯೂಸ್ ಒಂದರ ಹಿಂದೆ ಬಿದ್ದು ಕಚೇರಿ ಬಿಡುವಾಗ ತಡವಾಗಿತ್ತು.
ಬ್ರೇಕಿಂಗ್ ನ್ಯೂಸ್ ಕುರಿತ ಕೆಲಸ ಮುಗಿದಾಗ ಮುಂಜಾನೆ 3.03 ಕಳೆದಿತ್ತು. ಆ ಹೊತ್ತಿನಲ್ಲಿ ಝಾಂಡೇವಾಲನ್ ಆಫೀಸ್‌ನಿಂದ ಹೊರಟ ಅವರು ತಾನೇ ಕಾರು ಚಲಾಯಿಸುತ್ತ ವಸಂತ್ ಕುಂಜ್ ನಲ್ಲಿದ್ದ ತಮ್ಮ ಮನೆಗೆ ಹೊರಟಿದ್ದರು. ಬದುಕಿನ ಕೊನೆಯ ಡ್ರೈವ್ ಇದು ಅನ್ನೋದು ಅವರಿಗೆ ಗೊತ್ತಿರಲಿಲ್ಲ. ಹೀಗೆ ಮನೆ ಕಡೆ ಸಾಗುತ್ತಿದ್ದ ವೇಳೆ ಅದೆಲ್ಲಿಂದಲೋ ಹಾರಿ ಬಂದ ಗುಂಡು ತಲೆಯನ್ನು ಹೊಕ್ಕಿತ್ತು. ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಹೊಡೆದಿತ್ತು.
Read this : ರಾಧಿಕಾ ಕುಮಾರಸ್ವಾಮಿಯವರ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ
15 ವರ್ಷಗಳ ಹಿಂದೆ ನಡೆದ ಈ ಕೊಲೆ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಐವರು ತಪ್ಪಿತಸ್ಥರು ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ. ನಾಲ್ವರು ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲಿಕ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಕೊಲೆ ಮತ್ತು ಲೂಟಿಯ ಅಪರಾಧಿಗಳೆಂದು ಪರಿಗಣಿಸಲಾಗಿದ್ದು, ಐದನೇ ಆರೋಪಿ ಅಜಯ್ ಸೇಥಿ, ಇತರರಿಗೆ ಸಹಾಯ ಮಾಡಿದ ತಪ್ಪಿತಸ್ಥನೆಂದು ಪರಿಗಣಿಸಲಾಗಿದೆ.

ಘಟನೆ ಹಿನ್ನಲೆ
ಕೆಲಸ ಮುಗಿಸಿ ಮನೆ ಕಡೆ ತೆರಳುತ್ತಿದ್ದ ಸೌಮ್ಯ ವಿಶ್ವನಾಥನ್ ಅವರನ್ನು ದರೋಡೆಕೋರರ ಗುಂಪೊಂದು ಗಮನಿಸಿದೆ. ಈ ಹೊತ್ತಿನಲ್ಲಿ ಒಂಟಿ ಮಹಿಳೆಯೊಬ್ಬರು ತೆರಳುತ್ತಿದ್ದಾರೆ ಅಂದ್ರೆ ಅವರ ಬಳಿ ನಗ ನಗದು ಇರುತ್ತದೆ ಅನ್ನುವುದು ಅವರ ಊಹೆಯಾಗಿತ್ತು. ಅದರಂತೆ ಆರೋಪಿಗಳು ಕಾರನ್ನು ಹಿಂಬಾಲಿಸಿ, ಬಳಿ ಓವರ್ ಟೇಕ್ ಮಾಡಿದ್ದಾರೆ.
ಅಪಾಯ ಮುನ್ಸೂಚನೆ ಸಿಕ್ಕ ಸೌಮ್ಯ ಕಾರಿನ ವೇಗ ಹೆಚ್ಚಿಸಿದ್ದಾರೆ. ಈ ವೇಳೆ ಆರೋಪಿಗಳು ಸೌಮ್ಯ ಅವರ ಕಾರನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ, ನಿಲ್ಲಿಸದ ಕಾರಣ ದೇಶಿ ನಿರ್ಮಿತ ಕಂಟ್ರಿ ಮೇಡ್ ಗನ್ ನಿಂದ ಗುಂಡು ಹಾರಿಸಿದ್ದಾರೆ. ತಲೆಗೆ ಗುಂಡು ತಗುಲಿತು, ಇನ್ನೇನು ಕೆಲವೇ ಹೊತ್ತಿನಲ್ಲಿ ಮನೆ ತಲುಪಬೇಕಾಗಿದ್ದ ಕಾರು ನೆಲ್ಸನ್ ಮಂಡೇಲಾ ಮಾರ್ಗದಲ್ಲೇ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿತು.
ಈ ವೇಳೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಾದ 20 ನಿಮಿಷಗಳ ನಂತ್ರ ಸೌಮ್ಯ ಅವರ ಪರಿಸ್ಥಿತಿ ಗಮನಿಸಲು ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟು ಹೊತ್ತಿಗೆ ಪೊಲೀಸರು ಇರುವುದನ್ನು ಗಮನಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
Read this : 1.5 ಕೋಟಿ ರೂಪಾಯಿ ಗೆದ್ದ ಪೊಲೀಸ್ ಅಧಿಕಾರಿ ಅಮಾನತು
ಈ ನಡುವೆ ಮುಂಜಾನೆ 3.45 ರ ಸುಮಾರಿಗೆ, ಹತ್ತಿರದ ರೆಸ್ಟೋರೆಂಟ್ ನ ಸಿಬ್ಬಂದಿ ಸೈಕಲ್ ಮೇಲೆ ಬರುತ್ತಿದ್ದಾಗ ಮಹಿಳೆಯೊಬ್ಬರು ಕಾರಿನಲ್ಲಿ ರಕ್ತ ಸಿಕ್ತವಾಗಿ ಬಿದ್ದಿರೋದನ್ನ ಗಮನಿಸಿದ್ದಾರೆ, ಹೆಡ್ ಲೈನ್ ಗಳು ಆನ್ ಇದೆ, ಕಾರಿನ ಇಂಜಿನ್ ಚಾಲನಾ ಸ್ಥಿತಿಯಲ್ಲೇ ಇರೋದನ್ನ ಗಮನಿಸಿ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 15 ವರ್ಷಗಳ ಹಿಂದೆ ಈಗಿನಂತೆ ಟೆಕ್ನಿಕಲ್ ಸಾಕ್ಷಿಗಳು ಸುಲಭವಾಗಿ ಲಭ್ಯವಿರಲಿಲ್ಲ. ಹೀಗಾಗಿ ದುಷ್ಕರ್ಮಿಗಳನ್ನು ಬಂಧಿಸೋದು ಸುಲಭವಾಗಿರಲಿಲ್ಲ. ಒಂದು ಹಂತದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆಯೂ ಚಿಂತಿಸಲಾಗಿತ್ತು. ಆದರೆ ಕುಟುಂಬಸ್ಥರು ದೆಹಲಿ ಪೊಲೀಸರ ಬಗ್ಗೆ ವಿಶ್ವಾಸವಿಟ್ಟಿದ್ದರು. ವರುಷ ಕಳೆದರೂ ಆರೋಪಿಗಳ ಪತ್ತೆಯಾಗಿರಲಿಲ್ಲ. ಹಾಗಿದ್ದರೂ ಸೌಮ್ಯ ಕುಟುಂಬಸ್ಥರಿಗೆ ಪೊಲೀಸರ ಮೇಲೆ ಭರವಸೆ ಇತ್ತು. ಅದರಂತೆ ದೆಹಲಿ ಪೊಲೀಸರು ನಂಬಿಕೆಗೆ ತಕ್ಕಂತೆ ನಡೆದುಕೊಂಡರು.
2009 ರಲ್ಲಿ ಮತ್ತೊಬ್ಬ ಮಹಿಳೆ ಜಿಗೀಶಾ ಘೋಷ್ ಹತ್ಯೆಯ ತನಿಖೆಯ ಸಂದರ್ಭದಲ್ಲಿ ಪೊಲೀಸರು ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣದಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಾರ್ಚ್ 18, 2009 ರಂದು ಘೋಷ್ ಅವರನ್ನು ಲೂಟಿ ಮಾಡಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ರವಿ ಕಪೂರ್ ಅನ್ನುವನನ್ನು ಬಂಧಿಸಲಾಗಿತ್ತು. ಈ ವೇಳೆ ಸೌಮ್ಯ ಹತ್ಯೆಯ ಸುಳಿವು ಸಿಕ್ಕಿದೆ. ಇದೀಗ ಸುದೀರ್ಘ ಅವಧಿಯ ಬಳಿಕ ಆರೋಪಿಗಳಿಗೆ ಶಿಕ್ಷೆಯಾಗಿದೆ. ಪ್ರಕರಣ ಮುಂದಿನ ನ್ಯಾಯಾಲಯಗಳಿಗೆ ಹೋಗುವ ಸಾಧ್ಯತೆಗಳಿದೆ, ಅಲ್ಲೂ ಆರೋಪಿಗಳಿಗೆ ಶೀಘ್ರ ಶಿಕ್ಷೆಯಾದರೆ ಸಾಕು.
ಇನ್ನು ಈ ತೀರ್ಪು ಕುರಿತಂತೆ ಸೌಮ್ಯಾ ಅವರ ಸಹೋದ್ಯೋಗಿಯಾಗಿದ್ದ, ಈಗ ಇಂಡಿಯಾ ಟುಡೇ ನ್ಯೂಸ್ ನಿರ್ದೇಶಕರಾಗಿರುವ ರಾಹುಲ್ ಕನ್ವಾಲ್ ಪ್ರತಿಕ್ರಿಯಿಸಿದ್ದು, “ಸೌಮ್ಯ ವಿಶ್ವನಾಥನ್ ಅವರು ಉತ್ತಮ ಪತ್ರಕರ್ತೆಯಾಗಿದ್ದರು. ಕೊಲೆಯಾದ ರಾತ್ರಿ, ಸೌಮ್ಯಾ ಅವರು ಮಧ್ಯಾಹ್ನದ ಪಾಳಿಯನ್ನು ಮುಗಿಸಿ ರಾತ್ರಿಯ ಶಿಫ್ಟ್ ನಲ್ಲಿ ಬಂದವರಿಗೆ ಸಹಾಯ ಮಾಡಲು ನಿಂತಿದ್ದರು.
ಆಕೆಯ ಭೀಕರ ಹತ್ಯೆಯು 15 ವರ್ಷಗಳಿಂದ ನನ್ನ ಕಾಡುತ್ತಿದೆ. ಸಾಕೇತ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಪಾಂಡೆ ಅವರು ಎಲ್ಲಾ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದಾಗ, ಮನಸ್ಸು ಸಮಾಧಾನವಾಯ್ತು ಅಂದಿದ್ದಾರೆ.
ಇನ್ನು ತೀರ್ಪಿನ ಕುರಿತಂತೆ ಸೌಮ್ಯಾ ಪೋಷಕರಾದ ಮಾಧವಿ ವಿಶ್ವನಾಥನ್ ಮತ್ತು ಎಂಕೆ ವಿಶ್ವನಾಥನ್ ಕಣ್ಣೀರು ಹಾಕಿದ್ದು. “ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ, ಆದರೆ ಇಂದಿನ ತೀರ್ಪು ಕ್ರಿಮಿನಲ್ ಗಳಿಗೆ ಎಚ್ಚರಿಕೆ ಗಂಟೆಯಾಗಲಿದೆ. ಆರೋಪಿಗಳಿಗೆ ಶಿಕ್ಷೆಯಾಗದೆ ಹೋದರೆ ಅಪರಾಧಿಗಳು ಧೈರ್ಯಶಾಲಿಯಾಗುತ್ತಾರೆ. ಹಾಗಿದ್ದರೂ ಮಗಳನ್ನು ಕೊಂದವರಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
Discussion about this post