ಚಂದನವನದಲ್ಲಿ ಇದೀಗ ಮದುವೆ ಸಂಭ್ರಮ. ಹಿರಿ ತೆರೆ ಮತ್ತು ಕಿರು ತೆರೆಯ ಮಂದಿ ಪೈಪೋಟಿಗೆ ಬಿದ್ದವರಂತೆ ಸಪ್ತಪದಿ ತುಳಿಯುತ್ತಿದ್ದಾರೆ.
ಮತ್ತೊಂದು ಕಡೆ ದೊಡ್ಮನೆಯಲ್ಲೂ ಮದುವೆ ಸಂಭ್ರಮ. ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ಯುವರಾಜ್ ಕುಮಾರ್ ವಿವಾಹ ಸಡಗರ ಸಂಭ್ರಮದಿಂದ ಮುಕ್ತಾಯಗೊಂಡಿದೆ.
ಈ ನಡುವೆ ಯುವರಾಜಕುಮಾರ್ – ಶ್ರೀದೇವಿ ಮದುವೆ ಹಾಗೂ ಆರತಕ್ಷತೆಯಲ್ಲಿ ವಿನಯ್ ರಾಜ್ ಕುಮಾರ್ ಮತ್ತು ರುಕ್ಸಾರ್ ದಿಲ್ಲಾನ್ ಜೋಡಿಯ ಓಡಾಟ ಕಂಡ ಮೇಲೆ ದೊಡ್ಮನೆಯಲ್ಲಿ ಶೀಘ್ರದಲ್ಲೇ ಕಲ್ಯಾಣ ಮಹೋತ್ಸವ ಅನ್ನುವ ಮಾತು ಕೇಳಿ ಬಂದಿದೆ.
ಡಾ. ರಾಜಕುಮಾರ್ ಅವರ ಮೊಮ್ಮಗ ವಿನಯ್ ರಾಜಕುಮಾರ್ ಹಾಗೂ ‘ರನ್ ಆಂಟೋನಿ’ ಸಿನಿಮಾ ನಾಯಕಿ ಪಂಜಾಬಿ ಹುಡುಗಿ ರುಕ್ಸಾರ್ ದಿಲ್ಲಾನ್ ಪ್ರೇಮಿಸುತ್ತಿದ್ದಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿವೆ.
ವಿನಯ್ ರಾಜಕುಮಾರ್ ಸಿದ್ದಾರ್ಥ್ ನಂತರ ‘ರನ್ ಆಂಟೋನಿ’ ಸಿನಿಮಾ ಮಾಡಿದರು. ಚಿತ್ರೀಕರಣ ಸಮಯದಲ್ಲೇ ಪ್ರೇಮಾಂಕುರವಾಗಿದೆ. ಹಲವು ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಇವರಿಬ್ಬರನ್ನು ಜೊತೆಯಾಗಿ ನೋಡಲಾಗಿತ್ತು.
ರುಕ್ಸಾರ್ ಪಂಜಾಬಿ ಹುಡುಗಿಯಾಗಿದ್ದು, ಲಂಡನ್ ನಲ್ಲಿ ಹುಟ್ಟಿದ ಬಳಿಕ ಗೋವಾದಲ್ಲಿ ಮೊದಲ ಹಂತದ ಶಿಕ್ಷಣ ಮುಗಿಸಿ ಬಳಿಕ ಬೆಂಗಳೂರಿನ ಬಿಷಪ್ ಕಾಟನ್ ಅಲ್ಲಿ ಫ್ಯಾಷನ್ ಡಿಸೈನ್ ಮತ್ತು ಬೆಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದರು.
ರನ್ ಆಂಟೋನಿ ನಂತರ ತೆಲುಗು ಸಿನಿಮಾ ಆಕತಾಯಿ, ಕೃಶರ್ಜುನ ಯೂದ್ದಮ್, ಎ ಬಿ ಸಿ ಡಿ (ಅಮೆರಿಕನ್ ಬಾರ್ನ್ ಕನ್ ಫ್ಯೂಸ್ ದೇಸೀ) ಮತ್ತು ಭಾಂಗ್ರ ಪಾ ಹಿಂದಿ ಸಿನಿಮಾಗಳಲ್ಲಿ ಸಹ ಇವರು ಅಭಿನಯಿಸಿದ್ದಾರೆ.
ಕನ್ನಡದಲ್ಲಿ ‘ಕಟ್ಟೆ’ ಸಿನಿಮಾದಲ್ಲೂ ಇವರು ಪಾತ್ರ ಮಾಡಿದ್ದು ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
Discussion about this post