ನವದೆಹಲಿ : ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟ್ವಿಟ್ಟರ್ ಸಂಸ್ಥೆ ಶಾಕ್ ಕೊಟ್ಟಿದೆ. ಅವರೇ ಮಾಡಿಕೊಂಡ ಎಡವಟ್ಟಿನ ಕಾರಣದಿಂದ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರತಿಕ್ರಿಯೆ ಕೊಟ್ಟಿದ್ದು, ರಾಹುಲ್ ಗಾಂಧಿಯವರ ಟ್ವಿಟರ್ ಖಾತೆ ಮರುಸ್ಥಾಪನೆಗಾಗಿ ಪ್ರಯತ್ನಗಳು ನಡೆಯುತ್ತಿದೆ. ಅಲ್ಲಿಯವರೆಗೆ, ಅವರು ತಮ್ಮ ಇತರ ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕಹೊಂದಿರುತ್ತಾರೆ. ನಮ್ಮ ಜನರಿಗಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತಾರೆ. ಅವರ ಉದ್ದೇಶಕ್ಕಾಗಿ ಹೋರಾಡುತ್ತಾರೆ ಅಂದಿದೆ.
ರಾಹುಲ್ ಗಾಂಧಿ ಟ್ವಿಟರ್ ಖಾತೆ ರದ್ದುಗೊಂಡಿದ್ಯಾಕೆ..?
ರಾಜಧಾನಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಅತ್ಯಾಚಾರ, ಸಜೀವ ದಹನಕ್ಕೆ ಒಳಗಾದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ ಈ ಸಂಬಂಧ ಟ್ವೀಟ್ ಒಂದನ್ನು ಹಂಚಿಕೊಂಡಿದ್ದರು. ಇದೇ ಟ್ವೀಟ್ ಇದೀಗ ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆಗೆ ಕಂಟಕವಾಗಿದೆ.
ಸಂತ್ರಸ್ಥೆಯ ಕುಟುಂಬದ ಫೋಟೋವನ್ನು ಮೈಕ್ರೋಬ್ಲಾಗಿಂಗ್ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿರುವ ಈ ಟ್ವೀಟ್ ಬಾಲನ್ಯಾಯ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಹುಲ್ ಮೇಲೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಮತ್ತು ಟ್ವಿಟರ್ಗೆ ಸೂಚಿಸಿತ್ತು.
ಈ ಫೋಟೋದಲ್ಲಿ ಸಂತ್ರಸ್ತೆಯ ತಂದೆ ಮತ್ತು ತಾಯಿಯ ಮುಖಗಳನ್ನು ಕಾಣಬಹುದಾಗಿದೆ. ಇದು ಬಾಲಕಿಯ ಗುರುತನ್ನು ಬಹಿರಂಗಪಡಿಸುತ್ತದೆ. ಹೀಗಾಗಿ ಪೋಕ್ಸೊ ಕಾಯ್ದೆಯ ಸೆಕ್ಷನ್ 23, ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 74, ಐಪಿಸಿ ಸೆಕ್ಷನ್ 228 ಎ ಉಲ್ಲಂಘನೆಯಾಗಿದೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ಹೇಳಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
Discussion about this post