ಅಯೋಧ್ಯೆಯ ಪ್ರತಿಷ್ಠಾಪನೆ ಕಾರ್ಯದಲ್ಲಿ ಸಂತೋಷದಿಂದ ಭಾಗಿಯಾಗುತ್ತೇನೆ
ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳು ನಡೆಯುತ್ತಿದೆ.
ಈ ನಡುವೆ ಗಣ್ಯರು, ಅತೀ ಗಣ್ಯರಿಗೂ ಆಹ್ವಾನ ಪತ್ರಿಕೆ ಹಂಚುವ ಕಾರ್ಯವೂ ಜೋರಾಗಿಯೇ ಸಾಗಿದೆ. ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಶ್ರೀ ರಾಮ ಲಾಲ್ , ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದ್ದಾರೆ.
ಈ ಬಗ್ಗೆ ಕುಮಾರಸ್ವಾಮಿಯವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು,
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ಶ್ರೀ ರಾಮ ಲಾಲ್ ಅವರು ಹಾಗೂ ಇತರರು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪರವಾಗಿ ಆಹ್ವಾನ ನೀಡಿದರು. ನನ್ನನ್ನು ಆಹ್ವಾನಿಸಿದ ಅವರೆಲ್ಲರಿಗೂ ಧನ್ಯವಾದಗಳು. ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಹಾಗೂ ಶ್ರೀರಾಮ ಸೇವಾ ಕೈಂಕರ್ಯದಲ್ಲಿ ಕುಟುಂಬ ಸಮೇತವಾಗಿ ಸಂತೋಷದಿಂದ ಭಾಗಿಯಾಗುತ್ತೇನೆ. ಅಂದಿದ್ದಾರೆ.
ಈ ನಡುವೆ ಕನ್ನಡದ ನಟ ಯಶ್ ಅವರಿಗೂ ಕಾರ್ಯಕ್ರಮದ ಆಹ್ವಾನ ಪತ್ರಿಕೆ ತಲುಪಿದೆಯಂತೆ. ಇನ್ನುಳಿದಂತೆ ರಿಷಬ್ ಶೆಟ್ಟಿಯವರನ್ನು ಈಗಾಗಲೇ ಆಹ್ವಾನಿಸಲಾಗಿದೆ.
ಇದನ್ನೂ ಓದಿ : ಶಬರಿಮಲೆಯಲ್ಲಿ ಅಪ್ಪಂ ಅರವಣ ಪ್ರಸಾದ ಉತ್ಪಾದನೆ ಸ್ಥಗಿತ : ಅಯ್ಯಪ್ಪ ಭಕ್ತರಿಗೆ ನಿರಾಶೆ
ಈಗಾಗಲೇ ರಣಬೀರ್ ಕಪೂರ್, ಅಲಿಯಾ ಭಟ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಭಾಸ್, ಬಾಲಿವುಡ್ ನಟ ಟೈಗರ್ ಶ್ರಾಫ್, ಆಯುಷ್ಮಾನ್ ಖುರನಾ ಅವರಿಗೂ ಆಹ್ವಾನ ನೀಡುವ ಸಾಧ್ಯತೆಗಳಿದೆ.
ಅಮಿತಾಬ್ ಬಚ್ಚನ್,ಮಾಧುರಿ ದೀಕ್ಷಿತ್, ಅನುಪಮೇ ಖೇರ್, ಅಕ್ಷಯ ಕುಮಾರ್, ರಜನಿಕಾಂತ್, ಸಂಜಯ ಲೀಲಾ ಬನ್ಸಾಲಿ, ಚಿರಂಜೀವಿ, ಮೋಹನ್ ಲಾಲ್, ಧನುಷ್ ಅವರನ್ನು ಈಗಾಗಲೇ ಕಾರ್ಯಕ್ರಮಕ್ಕೆ ಅಹ್ವಾನಿಸಲಾಗಿದೆ.
ಮೂರು ಸಾವಿರ ಮಂದಿ ವಿಐಪಿಗಳು ಸೇರಿದಂತೆ ಒಟ್ಟು 7 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಉದ್ಯಮಿ ಮುಖೇಶ್ ಅಂಬಾನಿ, ರತನ್ ಟಾಟ, ಗೌತಮ್ ಅದಾನಿಯವರಿಗೂ ಅಹ್ವಾನ ಪತ್ರಿಕೆ ತಲುಪಿಸಲಾಗಿದೆ.
ಪ್ರಸಿದ್ಧ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮನಾಗಿ ಬಣ್ಣ ಹಚ್ಚಿದ್ದ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನು ಅಯೋಧ್ಯೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ 50 ಕರಸೇವಕರ ಕುಟುಂಬಗಳಿಗೂ ಇದೀಗ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ.
Discussion about this post