ನವದೆಹಲಿ : ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಯ್ತು ಎಂದು ನಿಟ್ಟುಸಿರುಬಿಡುವ ಹೊತ್ತಿಗೆ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ವೈರಸ್ ದೇಶದಲ್ಲಿ ಮೂರನೇ ಅಲೆಯ ಹುಟ್ಟಿಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿದೆ. ಈಗಾಗಲೇ ಕರ್ನಾಟಕದಲ್ಲಿ ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯ ತಡೆಬೇಲಿಯನ್ನು ದಾಟಿ ಹರಡಲು ತುಂಬಾ ದಿನಗಳು ಬೇಕಾಗಿಲ್ಲ.
ಬೇಕಾಬಿಟ್ಟಿ ಸಮಾರಂಭ, ರಾಜಕೀಯ ಸಮಾವೇಶ ನಡೆದಿರುವ ಕಾರಣ ಅದೆಷ್ಟು ಮಂದಿಯಲ್ಲಿ ರೂಪಾಂತರಿ ವೈರಸ್ ಗಳು ಕಾಣಿಸಿಕೊಂಡಿದೆಯೋ ಗೊತ್ತಿಲ್ಲ. ಮಂತ್ರಿಗಳೇ ಮಾಸ್ಕ್ ಮರೆತು ತಿರುಗಾಡಲು ಪ್ರಾರಂಭಿಸಿದ ಮೇಲೆ ಜನಸಾಮಾನ್ಯರಿಂದ ಮುಂಜಾಗ್ರತ ಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವೇ.
ಈ ನಡುವೆ ದೇಶದಲ್ಲಿ ಮೊದಲ ಒಮಿಕ್ರಾನ್ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದೀಗ ವಿದೇಶದಿಂದ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ 12 ಮಂದಿಗೆ ಕೊರೋನಾ ಸೋಂಕು ಅಂಟಿದ್ದು ಆಂತಕವನ್ನು ಏರಿಸಿದೆ.
ನಿನ್ನೆ ಮತ್ತು ಇಂದು ಬ್ರಿಟನ್, ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಸಿಂಗಾಪುರದಿಂದ ಆಗಮಿಸಿದ 12 ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಪ್ರಸ್ತುತ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಮಾದರಿಗಳನ್ನು ಜೀನೋಮ್ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇನ್ನು ಸೋಂಕಿತರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಒಮಿಕ್ರಾನ್ ನೆಗೆಟಿವ್ ಬಂದರೆ ಎಲ್ಲರನ್ನೂ ಹೋಮ್ ಐಸೋಲೇಶನ್ಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
Discussion about this post