ಭಾರತದಲ್ಲಿ ಕೊರೋನಾ ಹೇಗೆ ನಿಯಂತ್ರಣ ಬರುತ್ತಿಲ್ಲವೋ, ಹಾಗೇ ಈ ಲಸಿಕೆ ಗೊಂದಲವೂ ಮುಕ್ತಾಯವಾಗಿಲ್ಲ. ಅದರಲ್ಲೂ ದೇಶಿಯ ಲಸಿಕೆ ಕೋವ್ಯಾಕ್ಸಿನ್ ವಿಚಾರದಲ್ಲಿ ಇನ್ನೂ ಬರೀ ಗೊಂದಲ. ಕನಿಷ್ಟ ಪಕ್ಷ ಕೋವ್ಯಾಕ್ಸಿನ್ ಲಸಿಕೆ ಕಥೆಯೇನು ಅನ್ನುವುದನ್ನೂ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ.
ಈ ನಡುವೆ ಕೊವ್ಯಾಕ್ಸಿನ್ ನ 2 ಡೋಸ್ ಪಡೆದ ವ್ಯಕ್ತಿಯೋರ್ವ ತನಗೆ ಮತ್ತೊಮ್ಮೆ ಕೋವಿಶೀಲ್ಡ್ ಲಸಿಕೆ ಹಾಕಬೇಕೆಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ನಿಯಮಗಳ ಪ್ರಕಾರ ಯಾವುದೇ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಾಗಲೂ ಎರಡನೇ ಡೋಸ್ ಕೂಡ ಅದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.
ಇದೀಗ 50 ವರ್ಷದ ಗಿರಿ ಕುಮಾರ್ ಎರಡೂ ಡೋಸ್ ಪಡೆದ ಮೇಲೆ ಮೂರನೇ ಡೋಸ್ ಬೇರೆ ಲಸಿಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಾಗಂತ ಅವರ ತಪ್ಪಿಲ್ಲ.ಸೌದಿ ಅರೇಬಿಯಾದಲ್ಲಿ ಕೆಲಸದಲ್ಲಿರುವ ಗಿರಿಕುಮಾರ್ ಎರಡನೇ ಅಲೆಯ ಹೊತ್ತಿನಲ್ಲಿ ಭಾರತಕ್ಕೆ ಬಂದಿದ್ದರು. ಆಗ ಅಂದ್ರೆ ಏಪ್ರಿಲ್ 17 ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದರು. ಒಂದು ತಿಂಗಳ ಬಳಿಕ ಎರಡನೇ ಡೋಸ್ ಪಡೆದಿದ್ದರು.
ಆದರೆ ಇದೀಗ ನಾನ್ಯಾಕೆ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡೆ ಎಂದು ಗಿರಿಕುಮಾರ್ ಪರಿತಪಿಸುವಂತಾಗಿದೆ. ಆಗಸ್ಟ್ 30ಕ್ಕೆ ಮತ್ತೆ ಸೌದಿಗೆ ತೆರಳಲು ಸಿದ್ದತೆ ಮಾಡಿಕೊಂಡ್ರೆ, ಅವರನ್ನು ಕರೆಸಿಕೊಳ್ಳಲು ಆ ದೇಶ ಸಿದ್ದವಿಲ್ಲ. ನೀವು ಕೋವಿಶೀಲ್ಡ್ ಹಾಕಿಸಿಕೊಂಡರೆ ಮಾತ್ರ ಬರಬಹುದು, ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡರೆ ಬರಬೇಡಿ ಅಂದಿದೆ.
ಈ ಕಾರಣದಿಂದ ನನಗೆ ಕೋವಿಶೀಲ್ಡ್ ಕೊಡಿಸಿ, ಇಲ್ಲವಾದರೆ ನಾನು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿತ್ತು. ಇದೀಗ ಇದಕ್ಕೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ಮೂರನೇ ಲಸಿಕೆ ಕೊಡುವ ಕ್ರಮವೇ ನಮ್ಮಲ್ಲಿ ಇಲ್ಲ, ಜೊತೆಗೆ ಮಿಶ್ರ ಲಸಿಕೆ ಕೊಡುವುದನ್ನು ನಾವು ಉತ್ತೇಜಿಸುವುದಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿದೆ. ಹೀಗಾಗಿ ಗಿರಿಕುಮಾರ್ ಅವರಿಗೆ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಿಲ್ಲ ಅಂದಿದೆ,
ಎರಡಕ್ಕಿಂತ ಹೆಚ್ಚು ಡೋಸ್ ಲಸಿಕೆಯನ್ನು ಪಡೆಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮತ್ತೊಮ್ಮೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
Discussion about this post