ದೇವರನ್ನೇ ಯಾಮಾರಿಸಿದ ಚೆಕ್ ಭಕ್ತನಿಗಾಗಿ ಇದೀಗ ಹುಡುಕಾಟ ಪ್ರಾರಂಭವಾಗಿದೆ.
ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದ ಹುಂಡಿಯಲ್ಲಿ 100 ಕೋಟಿ ರೂಪಾಯಿ ಮೊತ್ತದ ಚೆಕ್ ಪತ್ತೆಯಾಗಿದೆ. ಕೋಟಿ ಮೊತ್ತದ ಚೆಕ್ ನೋಡಿ ಶಾಕ್ ಆದ ಅಧಿಕಾರಿಗಳು ಅಸಲಿ ಕಥೆ ತಿಳಿದ ಮೇಲೆ ದಂಗಾಗಿದ್ದಾರೆ.
ಪ್ರತಿ 15 ದಿನಗಳಿಗೊಮ್ಮೆ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಅದರಂತೆ ಈ ಬಾರಿಯೂ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದ ವೇಳೆ ಬರೋಬ್ಬರಿ 100 ಕೋಟಿ ರೂಪಾಯಿ ಮೊತ್ತದ ಚೆಕ್ ಸಿಕ್ಕಿದೆ.
ಅನಾಮಿಕ ಭಕ್ತರೊಬ್ಬರು 100 ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಹುಂಡಿಗೆ ಹಾಕಿದ್ದಾರೆ. ಹುಂಡಿಯಲ್ಲಿ ಪತ್ತೆಯಾದ ಈ ಚೆಕ್‍ನಲ್ಲಿ ಮೊದಲಿಗೆ 10 ರೂಪಾಯಿ ಎಂದು ಬರೆದು, ಮತ್ತೆ 100 ಕೋಟಿ ರೂ. ಎಂದು ಬರೆಯಲಾಗಿತ್ತು.
ಈ ಬಗ್ಗೆ ಅನುಮಾನಗೊಂಡ ದೇವಸ್ಥಾನ ಮುಖ್ಯಸ್ಥರು ಸಂಬಂಧಪಟ್ಟ ಬ್ಯಾಂಕ್ ಸಂಪರ್ಕಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಚೆಕ್ ಮೇಲಿನ ವಿವರಗಳನ್ನು ಪರಿಶೀಲಿಸಿದಾಗ, ಈ ಚೆಕ್ ರಾಧಾಕೃಷ್ಣ ಎಂಬುವರ ಉಳಿತಾಯ ಖಾತೆಗೆ ಸೇರಿದ್ದು ಅನ್ನೋದು ಗೊತ್ತಾಗಿದೆ. ಬ್ಯಾಂಕ್ ಖಾತೆ ಪರಿಶೀಲಿಸಿದ ಸಿಬ್ಬಂದಿಗೆ ಶಾಕ್ ಆಗಿದೆ. ಯಾಕೆಂದರೆ 100 ಕೋಟಿ ರೂ. ಮೊತ್ತದ ಚೆಕ್ ಕೊಟ್ಟವನ ಉಳಿತಾಯ ಖಾತೆಯಲ್ಲಿ ಕೇವಲ 17 ರೂ. ಇತ್ತು.
ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಲು ಚೆಕ್ ಹಾಕಿರುವ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ.
Discussion about this post