ಇತ್ತೀಚೆಗೆ ಪೂಜಾಗಾಂಧಿ ಹೆಸರು ಸಿನಿಮಾಗಳಿಗಿಂತ ಬೇರೆ ವಿಷಯಗಳಿಗೆ ಸುದ್ದಿಯಾಗಿದ್ದೇ ಹೆಚ್ಚು. ಹಾಗಾದರೆ, ವಿವಾದ – ರಾಜಕೀಯಗಳ ಹೊರತಾಗಿ ಪೂಜಾ ಗಾಂಧಿ ಸಿನಿಮಾಗಳ ಸುದ್ದಿ ಏನು ಇಲ್ಲವಾ ಎಂದು ಕೇಳುತ್ತಿದ್ದ ಸಿನಿಮಂದಿಗೆ ಪೂಜಾ ಗಾಂಧಿ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ, ಮತ್ತೆ ಪೂಜಾ ಗಾಂಧಿ ಬಿಗ್ ಸ್ಕ್ರೀನ್ ಮೇಲೆ ಬರುತ್ತಿದ್ದಾರೆ. ಅದೂ “ಸಂಹಾರಿಣಿ’ ಅವತಾರದಲ್ಲಿ.
ಮಹಿಳಾ ಸಾಹಸ ಪ್ರಧಾನ ಸಿನಿಮಾ ಇದು. ಕೈಯಲ್ಲಿ ಪಿಸ್ತೂಲು, ಕತ್ತಿ ಹಿಡಿದ ಪೂಜಾ ಗಾಂಧಿ ಅವರಿಗೆ ಇಲ್ಲಿ ಬೇರೆಯದ್ದೇ ಆದ ಪಾತ್ರವಿದೆ. ಮಹಿಳೆ ಮನಸ್ಸು ಮಾಡಿದರೆ ಎಂಥ ಹೋರಾಟಕ್ಕೂ ಸಿದ್ಧ ಎನ್ನುವ ಕತೆಯನ್ನು ಒಳಗೊಂಡ ಈ ಚಿತ್ರದ ನಿರ್ದೇಶನ ಮಾಡಿರುವುದು ಕೆ ಜವಾಹರ್ ಎಂಬುವವರು.
ಕ್ರೈಮ್ ಮತ್ತು ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನಿಮಾವಿದು. ಈ ಚಿತ್ರದಲ್ಲಿ ಪೂಜಾ ರಗಡ್ ಲುಕ್ ಇರುವಂಥ ಪಾತ್ರ ನಿರ್ವಹಿಸಿದ್ದಾರೆ. ಫೈಟ್ ಕೂಡ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಅಂದಹಾಗೆ ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಥ್ರಿಲ್ಲರ್ ಎಂದಿದೆ ಚಿತ್ರತಂಡ. ಕೆ. ಶಬರೀಶ್ ನಿರ್ಮಾಣದ ಈ ಸಿನಿಮಾದಲ್ಲಿ ಬಾಲಿವುಡ್ ನಟರಾದ ರಾಹುಲ್ ದೇವ್, ರವಿ ಕಾಳೆ, ಹ್ಯಾರಿ ಜೋಶ್, ಸಚಿನ್, ಅರುಣ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿಶೋರ್ ಪ್ರಧಾನ ಪಾತ್ರ ಮಾಡಿದ್ದು ವಿಶೇಷವಾಗಿದ್ದು, ಚಿತ್ರಕ್ಕೆ ರಾಜೇಶ್ ಕುಮಾರ್ ಛಾಯಾಗ್ರಹಣ, ಅಖೀಲ್ ಸಂಕಲನವಿದೆ.
Discussion about this post