ಬೆಂಗಳೂರು : ಕನ್ನಂಬಾಡಿ ಅಣೆಕಟ್ಟು ಬಿರುಕು ವಿಚಾರ ಹಾಗೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕುಮಾರಸ್ವಾಮಿ ಕಳೆದ ಎರಡು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ. ಸುಮಲತಾ ವಿಚಾರದಲ್ಲಿ ನೀಡಿದ ಹೇಳಿಕೆಗಳು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲಿದೆ ಎಂದು ಹಿರಿಯ ನಾಯಕರು ಎಚರಿಸಿದ ಬೆನ್ನಲ್ಲೇ ಈ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ.
ಈ ನಡುವೆ ದಳಪತಿಗಳು ಹಿಟ್ ಅಂಡ್ ರನ್ ಮಾಡಿ ಸೈಲೆಂಟ್ ಆಗಿದ್ದಾರೆ. ಹಾಗೇ ನೋಡಿದರೆ ಡ್ಯಾಮ್ ಬಿರುಕು ವಿಚಾರವನ್ನು ಕುಮಾರಸ್ವಾಮಿ ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಾಗಿತ್ತು. ಆದರೆ ಅವರು ಹಾಗೇ ಮಾಡಿಲ್ಲ. ದಳಪತಿಗಳು ಸುಮ್ಮನಾಗಿದ್ದರೂ ಸಂಸದೆ ಸುಮಲತಾ ಅಂಬರೀಷ್ ಮಾತ್ರ ಮೌನಕ್ಕೆ ಶರಣಾಗಿಲ್ಲ. ಬದಲಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಮುಂದುವರಿಸಿದ್ದಾರೆ.
ಈ ಬಗ್ಗೆ ಬೆಳಗ್ಗೆ ಟ್ವೀಟ್ ಮಾಡಿರುವ ಅವರು ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ ಎಂದು ಕುಟುಕಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಷ್, ಜೆಡಿಎಸ್ ನಾಯಕರು ಹೋಗುವ ದಾರಿಯಲ್ಲಿ ನಾವು ಹೋಗೋದು ಬೇಡ, ದ್ವೇಷ ರಾಜಕಾರಣ ಮಾಡೋದು ಬೇಡ, ನ್ಯಾಯಯುತವಾಗಿಯೇ ಶಾಂತಿಯುತವಾಗಿ ಅಕ್ರಮ ಗಣಿಗಾರಿಕೆ ಮತ್ತು ಕೆಆರ್ ಎಸ್ ಡ್ಯಾಂ ರಕ್ಷಣೆ ಬಗ್ಗೆ ಹೋರಾಡೋಣ ಎಂದು ಅಂಬರೀಷ್ ಅಭಿಮಾನಿಗಳಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಇದೇ ವೇಳೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಪ್ರತಿಕ್ರಿಯಿಸಿದ ಅವರು, ನನ್ನ ಹೋರಾಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿರುದ್ಧವಲ್ಲ, ಜೆಡಿಎಸ್ ನಾಯಕರ ವಿರುದ್ಧವಲ್ಲ, ನಾನು ದ್ವೇಷದ ರಾಜಕಾರಣ ಮಾಡಿಲ್ಲ, ಮಾಡುವುದೂ ಕೂಡಾ ಇಲ್ಲ. ಯಾರನ್ನೂ ಟಾರ್ಗೆಟ್ ಮಾಡುವ ಪ್ರಶ್ನೆಯೂ ಇಲ್ಲ. ನನ್ನ ಹೋರಾಟ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧವಷ್ಟೇ ಅಂದಿದ್ದಾರೆ.
Discussion about this post