ಗ್ರೇಸ್ ಅಂಕದ ಕೃಪೆಗೆ ಸಿದ್ದರಾಮಯ್ಯ ಮಧು ಬಂಗಾರಪ್ಪ ವಿರುದ್ದ ಗರಂ
ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಒಂದಲ್ಲ ಒಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡೇ ಬಂದಿರುವ ಮಧು ಬಂಗಾರಪ್ಪ ವಿರುದ್ಧ ಇದೀಗ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಸರ್ಕಾರವನ್ನು ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶೇ 20ರಷ್ಟು ಕೃಪಾಂಕವನ್ನ ನೀಡಿ ಈ ಭಾರಿ SSLC ವಿದ್ಯಾರ್ಥಿಗಳನ್ನು ಪಾಸು ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಶೇ 10ರಷ್ಟು ಕುಸಿತವನ್ನು ಕಾಣಲಾಗಿತ್ತು. ಒಂದು ವೇಳೆ ಕೃಪಾಂಕ ನೀಡದಿರುತ್ತಿದ್ರೆ ಕುಸಿತದ ಪ್ರಮಾಣ ಶೇ30ರಷ್ಟು ಇರೋದು.
ಆದರೆ ಶಿಕ್ಷಣ ಸಚಿವರ ಕೃಪಾಂಕದ ನಿರ್ಧಾರದಿಂದ ಇದೀಗ ಸರ್ಕಾರ ತೀವ್ರ ಮುಜುಗರವನ್ನು ಎದುರಿಸಬೇಕಾಗಿದೆ. ಫಲಿತಾಂಶದ ಪ್ರಮಾಣ ಏರಿಕೆಯಾಗಬೇಕು ಅನ್ನೋ ಕಾರಣಕ್ಕೆ ಗ್ರೇಸ್ ಅಂಕ ನೀಡಿದ್ರೆ ಪರೀಕ್ಷಾ ಗುಣಮಟ್ಟದ ಕಥೆಯೇನು ಎಂದು ಸರ್ಕಾರವನ್ನು ಶಿಕ್ಷಣ ತಜ್ಞರು ತರಾಟೆಗೆ ತೆಗೆದುಕೊಂಡಿದ್ದರು. ವಿದ್ಯಾರ್ಥಿಗಳು ಫೇಲ್ ಆಗದ ರೀತಿಯಲ್ಲಿ ಪಾಠಗಳು ನಡೆಯಬೇಕು. ಅದನ್ನು ಬಿಟ್ಟು ಗ್ರೇಸ್ ಅಂಕ ನೀಡಿದರೆ ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲಿ ದೊಡ್ಡ ಮಟ್ಟದ ಸಮಸ್ಯೆ ಎದುರಾಗುತ್ತದೆ ಎಂದು ಆತಂಕವನ್ನೂ ವ್ಯಕ್ತಪಡಿಸಿದ್ದರು.
ಆದರೆ ಮಧು ಬಂಗಾರಪ್ಪ ಈ ಆತಂಕದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ಇಲಾಖೆಯ ನಿರ್ಧಾರ ಸರಿಯಾಗಿದೆ ಅನ್ನುವ ರೀತಿಯಲ್ಲಿ ಮಾತನಾಡಿದ್ದರು.
ಇದನ್ನು ಓದಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್ : ನರೇಂದ್ರ ಮೋದಿ
ಆದರೆ ಯಾವಾಗ ವಿಷಯ ಮುಖ್ಯಮಂತ್ರಿಗಳ ಕಛೇರಿ ತಲುಪಿತೋ, ಶಿಕ್ಷಣ ತಜ್ಞರು ಆತಂಕದಲ್ಲಿ ಅರ್ಥವಿದೆ ಅನ್ನೋದು ಅವರಿಗೆ ಅರಿವಾಗಿದೆ. ಈ ನಡುವೆ ಶುಕ್ರವಾರ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಸಚಿವ ಮಧು ಬಂಗಾರಪ್ಪ ಅವರನ್ನು ಗ್ರೇಸ್ ಅಂಕ ನೀಡಿರುವುದರ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡೆಯನ್ನು ಪ್ರಶ್ನಿಸಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕುತ್ತಿದ್ದಂತೆ, ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರೇಸ್ ಅಂಕದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯ ಈ ವಾದವನ್ನು ಒಪ್ಪಿಕೊಳ್ಳಲಿಲ್ಲ ಅನ್ನಲಾಗಿದೆ. ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಶಿಕ್ಷಣ ಇಲಾಖೆಯ ನಡೆಗೆ ಬೇಸರ ಹಾಕಿದ್ದಾರೆ.
ಒಂದು ಹಂತದಲ್ಲಿ ಅಧಿಕಾರಿಗಳು ಕೊರೋನಾ ಸಮಯದಲ್ಲಿ ಗ್ರೇಸ್ ಮಾರ್ಕ್ಸ್ ಅನ್ನು ಶೇ 5 ರಿಂದ 10ಕ್ಕೆ ಏರಿಸಲಾಗಿತ್ತು. ಅದನ್ನೇ ನಾವು ಮುಂದುವರಿಸಿದ್ದೇವೆ ಅಂದಿದ್ದಾರೆ. ಈ ಉತ್ತರದಿಂದ ಕೆರಳಿದ ಸಿದ್ದರಾಮಯ್ಯ, ಈಗೆಲ್ಲಿ ಕೊರೋನಾ ಇದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರಂತೆ.
ಸಭೆಯ ನಂತರ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇರೋದಿಲ್ಲ. ಈ ವರ್ಷದ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಪರೀಕ್ಷಾ ನಡಾವಳಿ ಸರಿಪಡಿಸಿಕೊಳ್ಳುವುದಾಗಿ ಹೇಳಿದರು.
ಒಟ್ಟಿನಲ್ಲಿ ಮುಂದಾಲೋಚನೆ ಮತ್ತು ದೂರಾಲೋಚನೆ ಅನ್ನುವುದು ಶಿಕ್ಷಣ ಸಚಿವರಿಗೆ ಇಲ್ಲದೇ ಹೋದ್ರೆ ಭವಿಷ್ಯದ ಪ್ರಜೆಗಳ ಭವಿಷ್ಯಕ್ಕೆ ಹೇಗೆ ಕೊಡಲಿಯೇಟು ಬೀಳುತ್ತದೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ
Discussion about this post