ಪತಿ ತನ್ನ ಗಡ್ಡವನ್ನು ಕ್ಷೌರ ಮಾಡುವುದಿಲ್ಲ ಮತ್ತು ಏಳೆಂಟು ದಿನಗಳಾದರೂ ಸ್ನಾನ ಮಾಡುವುದಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಡಿವೋರ್ಸ್ ಗೆ ಅರ್ಜಿ ಹಾಕಿರುವ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ವಿಶೇಷ ಅಂದ್ರೆ ವಿಚ್ಛೇದನಕ್ಕೆ ಮಹಿಳೆ ಮತ್ತು ಪತಿ ಪರಸ್ಪರ ಒಪ್ಪಿ ಅರ್ಜಿ ಸಲ್ಲಿಸಿದ್ದಾರೆ.
ಭೋಪಾಲ್ ಸಮೀಪದ ಬಾರಿಗಢ ನಿವಾಸಿಯಾಗಿರುವ ಇವರಿಬ್ಬರ ವಿವಾಹ ಒಂದು ವರ್ಷದ ಹಿಂದೆ ನಡೆದಿತ್ತು. ಮದುವೆಯಾಗಿ ಸಂಭ್ರಮದಿಂದ ಬಂದ ವಧುವಿಗೆ ಗೊತ್ತಾಗಿದ್ದು, ಇವನು ಕೊಳಕು ಗಂಡ ಎಂದು.
ತಿಂಗಳುಗಳ ಕಾಲ ಗಡ್ಡ ತೆಗೆಯದ, ವಾರಾನುಗಟ್ಟಲೆ ಸ್ಸಾನ ಮಾಡದೆ, ಸುಗಂಧ ದ್ರವ್ಯ ಸ್ಪ್ರೇ ಮಾಡುವ ಗಂಡನ ಜೊತೆ ಹೇಗೋ ಒಂದು ವರ್ಷ ತಳ್ಳಿದ್ದಾಳೆ. ಗಂಡನಿಗೆ ಬುದ್ಧಿ ಮಾತು ಹೇಳಿದ್ದಾಯ್ತು, ಕಿತ್ತಾಡಿದ್ದು ಆಯ್ತು. ಆದರೆ ಆತ ಬದಲಾಗಲಿಲ್ಲ.
ಇನ್ನೂ ಸಹಿಸಿಕೊಳ್ಳುವುದು ಅಸಾಧ್ಯ ಎಂದು ಭೋಪಾಲ್ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಅರ್ಜಿ ಸ್ವೀಕರಿಸಿರುವ ಕೋರ್ಟ್ 6 ತಿಂಗಳು ಪ್ರತ್ಯೇಕವಾಗಿ ಜೀವನ ಮಾಡಿ, ಆ ನಂತರ ವಿಚಾರಣೆ ನಡೆಸೋಣ ಅಂದಿದೆ.
Discussion about this post