ಕುಮಾರಸ್ವಾಮಿ ಮತ್ತು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಅನ್ನಲಾಗಿರುವ ಪತ್ರ ಈಗ ಸದ್ದು ಮಾಡುತ್ತಿದೆ
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಇದೀಗ ದೇವೇಗೌಡರು ಕಟ್ಟಿ ಬೆಳೆಸಿದ ಪಕ್ಷ ಒಡೆದ ಮನೆಯಾಗಿದೆ. ಕುಮಾರಸ್ವಾಮಿಯವರು ಕೈಗೊಳ್ಳುತ್ತಿರುವ ನಿರ್ಧಾರ ಪಕ್ಷದ ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಹಿರಂಗವಾಗಿಯೇ ತೊಡೆ ತಟ್ಟಿದ್ದಾರೆ.
ಪರಿಸ್ಥಿತಿ ಗಮನಿಸಿದರೆ ಹಿಂದೊಮ್ಮೆ JDU, JDS ಹುಟ್ಟಿದ ರೀತಿಯಲ್ಲೇ , ಜೆಡಿಎಸ್ ಮತ್ತೊಮ್ಮೆ ಹೋಳಾಗುವ ಲಕ್ಷಣ ಕಾಣಿಸುತ್ತಿದೆ. ಈ ನಡುವೆ JDS ಪಕ್ಷದಿಂದ ಹೆಚ್ಡಿಕೆ, ನಿಖಿಲ್ ಕುಮಾರಸ್ವಾಮಿ ಉಚ್ಛಾಟನೆ ಮಾಡಿರುವ ಪತ್ರವೊಂದು ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಮಾಹಿತಿಗಳ ಪ್ರಕಾರ ಇದೊಂದು ಫೇಕ್ ಪತ್ರ ಅನ್ನಲಾಗಿದೆ. ನಕಲಿ ಪತ್ರವನ್ನು ಕಿಡಿಗೇಡಿಗಳು ಸೃಷ್ಟಿಸಿದ್ದಾರೆ ಅನ್ನಲಾಗಿದೆ. ಆದರೆ ಈ ಬಗ್ಗೆ ಸಿಎಂ ಇಬ್ರಾಹಿಂ ಸ್ಪಷ್ಟನೆ ನೀಡಬೇಕಾಗಿದೆ.
ಈ ನಡುವೆ ಉಚ್ಛಾಟನೆ ಪತ್ರದ ಬಗ್ಗೆ ಇಬ್ರಾಹಿಂ ಸ್ಪಷ್ಟನೆ ಕೊಟ್ಟಿದ್ದು, ಅಂತಹ ಯಾವುದೇ ನಿರ್ಧಾರಗಳು ಪಕ್ಷದಲ್ಲಿ ನಡೆದಿಲ್ಲ. ಹೀಗೆಲ್ಲಾ ನಕಲಿ ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಇಪ್ಪತ್ತಾರು ವಾರದ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ನಕಾರ
ಮಾಹಿತಿಗಳ ಪ್ರಕಾರ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಅವರ ಬಳಿ ಮೈತ್ರಿಯ ಬಗ್ಗೆ ಮಾತುಕತೆ ಮಾಡಿಲ್ಲವಂತೆ. ಪಕ್ಷದ ರಾಜ್ಯಾಧ್ಯಕ್ಷನಾಗಿರುವ ನನ್ನನ್ನೇ ಕುಮಾರಸ್ವಾಮಿ ಅದು ಹೇಗೆ ಸೈಡ್ ಲೈನ್ ಮಾಡಿದ್ರು ಅನ್ನೋದು ಅವರ ಆಕ್ರೋಶ. ಮಾತ್ರವಲ್ಲದೆ ಇಬ್ರಾಹಿಂ ಅವರಿಗೆ ಜೆಡಿಎಸ್ ಬಿಟ್ಟರೆ ಮತ್ತೆಲ್ಲೂ ರಾಜಕೀಯ ನೆಲೆಗಳಿಲ್ಲ, ಕಾಂಗ್ರೆಸ್ ಬಾಗಿಲು ಈಗಾಗಲೇ ಇಬ್ರಾಹಿಂ ಅವರಿಗೆ ಮುಚ್ಚಿದ್ದು, ಅಲ್ಪಸಂಖ್ಯಾತರ ನಾಯಕನಾಗಿ ಉಳಿಯಲು ಅವರಿಗೆ ಒದ್ದಾಡುತ್ತಿದ್ದಾರೆ ಅನ್ನಲಾಗಿದೆ.
ಇಂದು ಬೆಳಗ್ಗೆ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಸಭೆಯೊಂದು ನಡೆದಿದ್ದು, ದಳಪತಿಗಳ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಸಭೆಯಲ್ಲಿ ಮಾತನಾಡಿದ್ದ ಇಬ್ರಾಹಿಂ ನಮ್ಮದೇ ನಿಜವಾದ ಜೆಡಿಎಸ್ ಪಕ್ಷ, ನಾನೇ ರಾಜ್ಯಾಧ್ಯಕ್ಷ, ನನ್ನನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಶೀಘ್ರದಲ್ಲೇ 19 ಶಾಸಕರ ಜೊತೆ ಚರ್ಚಿಸಿ, ಹೊಸ ಕೋರ್ ಕಮಿಟಿ ರಚಿಸುತ್ತೇನೆ. ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಭೇಟಿಯಾಗಿ ನಮ್ಮ ನಿರ್ಧಾರ ತಿಳಿಸುತ್ತೇನೆ. ಕುಮಾರಸ್ವಾಮಿ ಅವರನ್ನು ಉಚ್ಛಾಟಿಸೋ ವಿಚಾರದಲ್ಲಿ ಶಾಸಕರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂದಿದ್ದರು.
ಈ ಬಗ್ಗೆ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ , ಅವರದೇ ಒರಿಜಿನಲ್ ಅಂತಾ ಬೋರ್ಡ್ ಹಾಕಿಕೊಳ್ಳಲಿ, ಅವರನ್ನು ಬೇಡ ಅಂದಿರೋರು ಯಾರು, ಅವರನ್ನು ಹಿಡ್ಕೊಂಡಿರೋರು ಯಾರು? ಉಚ್ಛಾಟನೆ ಮಾಡಿಕೊಳ್ಳಲಿ, ಅವರು ಫ್ರೀ ಇದಾರೆ ಏನ್ ಬೇಕಾದ್ರೂ ಮಾಡ್ಕೋಬಹುದು. ಅದು ಅವರಿಗೆ ಬಿಟ್ಟಿದ್ದು. ಅವರ ಮಾತನ್ನೆಲ್ಲಾ ಗಂಭೀರವಾಗಿ ಯಾಕೆ ತಗೋತಿರಿ? ಅಂದಿದ್ದಾರೆ.
Discussion about this post