ನವದೆಹಲಿ : ಕೊರೋನಾ ಸೋಂಕಿನ ತವರು ಚೀನಾ ಅನ್ನುವುದು ಜಗತ್ತಿಗೆ ಗೊತ್ತು. ಆದರೆ ಇದಕ್ಕೊಂದು ಸಾಕ್ಷಿ ಹುಡುಕಬೇಕಾಗಿದ್ದ ವಿಶ್ವ ಆರೋಗ್ಯ ಸಂಸ್ಥೆ ಮೊದ ಮೊದಲು ಚೀನಾದ ಹಂಗಿನಲ್ಲಿರುವಂತೆ ವರ್ತಿಸಿತ್ತು, ಸೋಂಕು ಪ್ರಾರಂಭಗೊಂಡ ಸಂದರ್ಭದಲ್ಲೇ ಸೋಂಕಿನ ಮೂಲದ ತನಿಖೆಗೆ ಇಳಿಯಲೇ ಇಲ್ಲ. ಯಾವಾಗ ಇತರ ರಾಷ್ಟ್ರಗಳು ಇದೊಂದು ಚೀನಾ ವೈರಸ್ ಎಂದು ಪ್ರತಿಪಾದಿಸಿ, ಸಾಕ್ಷಿಗಳನ್ನು ಕೊಟ್ಟಿತೋ, ಸೋಂಕಿನ ಮೂಲದ ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆ ಮುಂದಾಯ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೋಗುವಷ್ಟು ಹೊತ್ತಿಗ ಚೀನಾ ಸಾಕ್ಷಿಗಳನ್ನು ಇಟ್ಟು ಕೂತಿರಲು ಅದಕ್ಕೆ ತಲೆ ಕೆಟ್ಟಿದೆಯೇ. ಮಾತ್ರವಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ತಜ್ಞರನ್ನು ವುಹಾನ್ ಲ್ಯಾಬ್ ನೊಳಗೂ ಬಿಟ್ಟು ಕೊಡಲಿಲ್ಲ.
ಅಷ್ಟೇ ಅಲ್ಲದೆ ವುಹಾನ್ ಲ್ಯಾಬ್ ನ ಸಿಬ್ಬಂದಿ ಅಸ್ವಸ್ಥರಾಗಿದ್ದರು ಅನ್ನುವುದನ್ನು ಒಪ್ಪಿಕೊಳ್ಳಲು ಚೀನಾ ಸಿದ್ದವಿಲ್ಲ. ಜೊತೆಗೆ ಲ್ಯಾಬ್ ನಲ್ಲಿ ಯಾರಿಗೂ ಸೋಂಕು ಹರಡಿಲ್ಲ ಎಂದು ಹೇಳಿತ್ತು. ಆದರೆ ಸಿಬ್ಬಂದಿಯು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ದಾಖಲೆಗಳನ್ನು ಕೇಳಿದ್ರೆ ಅವೆಲ್ಲವನ್ನೂ ಕೊಡಲಾಗದು, ನಮ್ಮ ಪ್ರಜೆಗಳ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ವಾದ ಮಂಡಿಸಿದೆ.
ಇದಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಅಡ್ಡಗೋಡೆ ಮೇಲೆ ದೀಪವಿಟ್ಟ ವರದಿಯೊಂದನ್ನು ಕೊಟ್ಟಿತ್ತು. ಈ ವರದಿಯ ಬೆನ್ನಲ್ಲೇ ಕೊರೋನಾ ಅನ್ನುವುದು ವುಹಾನ್ ವೈರಸ್ ಎಂದು ಮತ್ತೆ ಸಾಕ್ಷಿಗಳು ಬಿಡುಗಡೆಯಾಗಲಾರಂಭಿಸಿತು. ಹೀಗಾಗಿ 2ನೇ ಸುತ್ತಿನ ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ.
ಆದರೆ ಈಗ ಎರಡನೇ ಸುತ್ತಿನ ತನಿಖೆಗೆ ಕ್ಯಾತೆ ತೆಗೆದಿರುವ ಚೀನಾ, ವುಹಾನ್ ಲ್ಯಾಬ್ ನಿಂದ ಕೊರೋನಾ ವೈರಸ್ ಸೋರಿಕೆಯಾಗಿದೆ ಅನ್ನುವುದನ್ನು ಒಪ್ಪಲು ಸಿದ್ದವಿಲ್ಲ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತಾಪವನ್ನು ತಿರಸ್ಕರಿಸಿರುವ ಚೀನಾ, ಎರಡನೇ ಸುತ್ತಿನ ತನಿಖೆಯನ್ನು ನಾವು ಪಾಲಿಸುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದೆ.
ಈಗಾಗಲೇ ಮೊದಲ ಹಂತದಲ್ಲಿ ನಾಲ್ಕು ವಾರಗಳ ಕಾಲ ತನಿಖೆ ನಡೆದಿದೆ. ಈ ಕಾರಣದಿಂದ ಮುಂದಿನ ತನಿಖೆ ವಿವಿಧ ದೇಶಗಳಲ್ಲಿ ನಡೆಯಬೇಕು. ಕೊರೋನಾ ಕೇವಲ ಚೀನಾದಲ್ಲಿ ಕಾಣಿಸಿಕೊಂಡಿಲ್ಲ. ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ಅದನ್ನು ಜಗತ್ತಿಗೆ ಮೊದಲು ಪ್ರಕಟಿಸಿದ್ದು ಮಾತ್ರ ಚೀನಾ ಎಂದು ಬೆನ್ನು ತಟ್ಟಿಕೊಂಡಿದೆ.
Discussion about this post