ಬೆಂಗಳೂರು : ಕೊರೋನಾ ವಿರುದ್ಧದ ಹೋರಾಟದಲ್ಲಿ ನಿರತವಾಗಿರುವ ಭಾರತಕ್ಕೆ ಬಲ ತುಂಬುವ ಸಲುವಾಗಿ ಮತ್ತೊಂದು ಲಸಿಕೆ ಭಾರತಕ್ಕೆ ಬರಲಿದೆ. ಈಗಾಗಲೇ ಭಾರತದಲ್ಲಿ ಮೂರನೇ ಹಂತದ ಟ್ರಯಲ್ ಮುಗಿಸಿರುವ ಈ ಲಸಿಕೆ ಇನ್ನು ಕೆಲವೇ ದಿನಗಳಲ್ಲಿ ಜನರಿಗೆ ವಿತರಣೆಯಾಗಲಿದೆ.
ರಷ್ಯಾದ ಸ್ಪುಟ್ನಿಕ್ 5 ಲಸಿಕೆಯನ್ನು ತುರ್ತು ಬಳಕೆಗೆ ಬಳಸಬಹುದು ಎಂದು ಸೋಮವಾರ ಭಾರತ ಜೌಷಧ ಪ್ರಾಧಿಕಾರದ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತೀಯ ಜೌಷಧ ನಿಯಂತ್ರಣ ಪ್ರಾಧಿಕಾರ ಅಂತಿಮ ಒಪ್ಪಿಗೆ ನೀಡಿದೆ.
ಅಂತಿಮ ಅನುಮತಿ ಸಿಕ್ಕ ಬೆನ್ನಲ್ಲೇ ಭಾರತದಲ್ಲಿ ಸ್ಪುಟ್ನಿಕ್ 5 ಲಸಿಕೆ ಉತ್ಪಾದನೆ ಮತ್ತು ಪೂರೈಕೆಯ ಹೊಣೆ ಹೊತ್ತಿರುವ ಡಾ. ರೆಡ್ಡೀಸ್ ಲ್ಯಾಬ್ ರಷ್ಯಾದಿಂದ ಲಸಿಕೆ ಆಮದು ಮಾಡಿಕೊಳ್ಳುವುದಾಗಿ ತಿಳಿಸಿದೆ. 25 ಕೋಟಿ ಡೋಸ್ ಲಸಿಕೆಗಳು ಇನ್ನು ಕೆಲವೇ ವಾರಗಳಲ್ಲಿ ಭಾರತಕ್ಕೆ ಬರಲಿದೆ. ಜೂನ್ ಜುಲೈ ಬಳಿಕ ಭಾರತದಲ್ಲೇ ಸ್ಪುಟ್ನಿಕ್ 5 ಉತ್ಪಾದನೆ ಪ್ರಾರಂಭವಾಗಲಿದೆ. ವರ್ಷಕ್ಕೆ 85 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಗುರಿಯನ್ನು ಡಾ. ರೆಡ್ಡೀಸ್ ಲ್ಯಾಬ್ ಹೊಂದಿದೆ.
ಸ್ಪುಟ್ನಿಕ್ 5 ಈ ಹಿಂದಿನ ಲಸಿಕೆಗಳಂತೆ ಎರಡು ಡೋಸ್ ಗಳ ಲಸಿಕೆಯಾಗಿದ್ದು, ಮೊದಲ ಡೋಸ್ ಪಡೆದ 21 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕಾಗುತ್ತದೆ.
ಮೈನಸ್ 18 -20 degree Celsius ಕೋಲ್ಡ್ ಚೈನ್ ನಲ್ಲಿ ಇದನ್ನು ಸಾಗಿಸಬೇಕಾಗುತ್ತದೆ. ಹೀಗಾಗಿ ಈ ಲಸಿಕೆಯನ್ನು ಸರ್ಕಾರ ಉಚಿತವಾಗಿ ವಿತರಿಸುತ್ತದೆಯೇ ಅನ್ನುವ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.
ಜನವರಿಯಲ್ಲಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಎದುರಿಸಿದ್ದ ಸ್ಪುಟ್ನಿಕ್ 5 ಲಸಿಕೆಯ ದಾಖಲೆಗಳು ಇತ್ತೀಚಿಗೆ ಸಂಬಂಧಪಟ್ಟ ಇಲಾಖೆಗೆ ಸಲ್ಲಿಕೆಯಾಗಿತ್ತು.
ಈಗಾಗಲೇ ದೇಶದಲ್ಲಿ ಎರಡು ಲಸಿಕೆಗಳ ವಿತರಣೆ ಕಾರ್ಯ ನಡೆಯುತ್ತಿದೆ. ಹಲವು ರಾಜ್ಯಗಳು ಕೊರೋನಾ ಲಸಿಕೆಯ ಕೊರತೆ ಎದುರಿಸುತ್ತಿದೆ. ಹೀಗಾಗಿ ಮೂರನೇ ಲಸಿಕೆ ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಬಲ ತುಂಬಲಿದೆ.
Discussion about this post