ನವದೆಹಲಿ : ಸಿನಿಮಾ, ಧಾರವಾಹಿ, ವೆಬ್ ಸೀರಿಸ್, ರಿಯಾಲಿಟಿ ಶೋ ಸೇರಿದಂತೆ ಅನೇಕ ಮನೋರಂಜನಾ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಬಾಲ ನಟರನ್ನು ಬೇಕಾ ಬಿಟ್ಟಿ ಬಳಸಿಕೊಳ್ಳಲಾಗುತ್ತಿದೆ. TRP ಗಳಿಸುವ ಉದ್ದೇಶದಿಂದ ಮಕ್ಕಳಿಗೆ ಗೆಲುವಿನ, ಬಹುಮಾನದ ಆಸೆ ತೋರಿಸಿ ವಿಪರೀತಿ ಒತ್ತಡ ಹೇರಲಾಗುತ್ತಿದೆ.
ಈ ಬಗ್ಗೆ ಎಚ್ಚೆತ್ತುಕೊಂಡಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕರಡು ನಿಯಮವೊಂದನ್ನು ರೂಪಿಸಿದ್ದು, ಸಿನಿಮಾ, ಧಾರವಾಹಿ, ವೆಬ್ ಸೀರಿಸ್, ರಿಯಾಲಿಟಿ ಶೋ ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಬಾಲ ನಟರನ್ನು ಬಳಸಿಕೊಳ್ಳುವ ಮುನ್ನ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಜೊತೆಗೆ ಕಾರ್ಯಕ್ರಮಗಳಲ್ಲಿ ಮಕ್ಕಳು ಮದ್ಯಪಾನ, ಧೂಮಪಾನ ಮಾಡುವ ಮತ್ತು ಸಮಾಜವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವಂತೆ ಬಿಂಬಿಸಬಾರದು ಅನ್ನುವ ನಿಯಮ ಜಾರಿಗೆ ತರಲಾಗುತ್ತದೆ.

ಇನ್ನು ಮನೋರಂಜನಾ ಕಾರ್ಯಕ್ರಮದಲ್ಲಿ ಬಾಲನಟರ ಶೋಷಣೆ ಅಥವಾ ದೌರ್ಜನ್ಯ ತಡೆಗೆ ತೆಗೆದುಕೊಂಡಿರುವ ಕ್ರಮಗಳನ್ನು ನಿರ್ಮಾಪಕರು ವಿವರಿಸಬೇಕಾಗಿದ್ದು, 27 ದಿನಗಳಿಗಿಂತ ಅಧಿಕ ಕಾಲ ಯಾವುದೇ ಮಗು ಕೆಲಸ ಮಾಡುವಂತಿಲ್ಲ. ದಿನವೊಂದಕ್ಕೆ ಬಾಲ ನಟರಿಗೆ ಒಂದೇ ಶಿಫ್ಟ್ ಇರಬೇಕು ಹಾಗೂ ಪ್ರತೀ ಮೂರು ತಾಸಿಗೊಮ್ಮೆ ವಿಶ್ರಾಂತಿ ನೀಡಬೇಕು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ.
ಶೂಟಿಂಗ್ ಕಾರಣದಿಂದ ಬಾಲನಟರ ಶಿಕ್ಷಣಕ್ಕೆ ತೊಂದರೆಯಾಗಬಾರದು. ಶಾಲಾ ಹಾಜರಾತಿಯಿಂದ ಶೂಟಿಂಗ್ ಸಲುವಾಗಿ ವಿನಾಯತಿ ಪಡೆದಿದ್ದಲ್ಲಿ, ಖಾಸಗಿ ಶಿಕ್ಷಕರಿಂದ ಟ್ಯೂಷನ್ ಕೊಡಿಸುವುದು ನಿರ್ಮಾಪಕರ ಹೊಣೆಯಾಗಿದೆ.
ಬಾಲನಟರ ಶೇ20ರಷ್ಟು ಆದಾಯವನ್ನು ವಯಸ್ಕರಾಗುವ ತನಕ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಠೇವಣಿ ಇಡಬೇಕು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ. ಇದರೊಂದಿಗೆ ಕರಡು ನಿಯಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
Discussion about this post