ಅದು ಭಾನುವಾರ ಅಂದ್ ಏಪ್ರಿಲ್ ತಿಂಗಳ 21. ಬೆಂಗಳೂರು ಗಿರಿನಗರ ನಿವಾಸಿ ರಮೇಶ್ ಭಾನುವಾರವಾದ ಕಾರಣ ಮಾಲ್, ಸಿನಿಮಾ ಸುತ್ತಾಡುವ ಮಂದಿ ಸಾಕಷ್ಟಿರುತ್ತಾರೆ. ಆದಷ್ಟು ದುಡಿಯೋಣ ಎಂದು ಬೆಳಗ್ಗೆ ತಮ್ಮ ಆಟೋವನ್ನು ರಸ್ತೆಗಿಳಿಸಿದ್ದರು.
ಮಧ್ಯಾಹ್ನ ದೊಡ್ಡ ಬಾಕ್ಸ್ ಹತ್ತಿದ ವ್ಯಕ್ತಿಯೊಬ್ಬರು ಚಾಮರಾಜಪೇಟೆಯ ಸಾಹಿತ್ಯ ಪರಿಷತ್ ಇಳಿದು ಕಾಸು ಕೊಟ್ಟು ಹೊರಟು ಹೋಗಿದ್ದರು. ಆದರೆ ಬಾಕ್ಸ್ ಬಿಟ್ಟಿರೋದು ಪ್ರಯಾಣಿಕರಿಗೂ ಗೊತ್ತಿಲ್ಲ, ರಮೇಶ್ ಅವರಿಗೂ ಗೊತ್ತಾಗಲಿಲ್ಲ.
ಸಾಕಷ್ಟು ಸಮಯದ ನಂತ್ರ ಅರೇ ಆಟೋದಲ್ಲಿ ಬಾಕ್ಸ್ ಹಾಗೇ ಇದೆಯಲ್ಲ ಅನ್ನುವುದು ರಮೇಶ್ ಗಮನಕ್ಕೆ ಬಂದಿದೆ.
ಸರಿ ಆ ವ್ಯಕ್ತಿ ಯಾರು, ಎಲ್ಲಿಯವರು ಬಾಕ್ಸ್ ತಲುಪಿಸೋದು ಹೇಗೆ ಎಂದು ತಲೆಕೆಡಿಸಿಕೊಂಡ ರಮೇಶ್ ಬಾಕ್ಸ್ ತೆರೆದು ನೋಡಿದ್ರೆ ಒಂದಿಷ್ಟು ಪುಸ್ತಕಗಳು ಜೊತೆಗೊಂದಿಷ್ಟು ಆಮಂತ್ರಣ ಪತ್ರಿಕೆ ಇತ್ತು. ಸರಿಯಾಗಿ ನೋಡಿದ್ರೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಬಿಡುಗಡೆಯಾಗಬೇಕಾದ ಪುಸ್ತಕ ತನ್ನ ಆಟೋದಲ್ಲಿದೆ ಅನ್ನುವುದು ಗೊತ್ತಾಗಿದೆ.
ಏನೇ ಆಗ್ಲಿ ಎಂದು ರಮೇಶ್ ಸಾಹಿತ್ಯ ಪರಿಷತ್ ಕಡೆ ತನ್ನ ರಥದ ಚಕ್ರ ತಿರುಗಿಸಿದ್ದಾರೆ.
ಇತ್ತ ಸಾಹಿತ್ಯ ಪರಿಷತ್ ನಲ್ಲಿ ಬನಶಂಕರಿ ಬಳಿಯ ಕಾವೇರಿ ನಗರದ ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಹಾಸ್ಯ ಲೇಖಕ ನಾಗರಾಜ ಕೋಟೆ ಅವರ “ಕೋಟೆ ನಾಗನ ಕಾಮಿಡಿ ಕಗ’ ಪುಸ್ತಕ ಲೋಕಾರ್ಪಣೆ ಮತ್ತು “ನಾಗರಾಜ-54ರ ಅಭಿನಂದನೆ’ ಸಮಾರಂಭದ ಸಿದ್ಧತೆ ಭರ್ಜರಿಯಾಗಿ ಸಾಗಿತ್ತು.
ಇನ್ನೇನು ಕಾರ್ಯಕ್ರಮ ಶುರುವಾಗುವ ಹೊತ್ತು, ಅತಿಥಿಗಳು ಬಂದಾಗಿದೆ. ಕೆಲವೇ ಹೊತ್ತಿನಲ್ಲಿ ವೇದಿಕೆ ಹತ್ತುತ್ತಾರೆ. ಪುಸ್ತಕ ಬಿಡುಗಡೆ ಮಾಡಿಸಬೇಕು ಅನ್ನುವಷ್ಟರಲ್ಲಿ, ಪ್ರತಿಷ್ಠಾನದ ಅಧ್ಯಕ್ಷ ಪುಟ್ಟರಾಜು ಅವರಿಗೆ ಗೊತ್ತಾಗಿದೆ, ಪುಸ್ತಕದ ಬಾಕ್ಸ್ ಆಟೋದಲ್ಲಿ ಕಳೆದುಕೊಂಡಿದ್ದೇನೆ ಎಂದು.
ಗಡಿಬಿಡಿಯಲ್ಲಿ ಪುಸ್ತಕಗಳನ್ನು ವಾಹನದಲ್ಲೇ ಮರೆತಾಗಿದೆ. ಇನ್ನೇನು ಮಾಡುವುದು ಎಂದು ಲೇಖಕರ ಕಡೆಯಿಂದ ಬೈಸಿಕೊಂಡು, ಬಂದ ಅತಿಥಿಗಳ ಕೈಗೆ ಪುಸ್ತಕದ ಕವರ್ ಪೇಜ್ ಕೊಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸೋದು ಎಂದು ನಿರ್ಧರಿಸಿದ್ದಾರೆ. ಅದು ಇರೋದು ಒಂದೇ ಕವರ್ ಪೇಜ್ ಹೇಗೆಪ್ಪ ಅನ್ನುವ ತಲೆ ನೋವು ಸಂಘಟಕರದ್ದು. ಪುಸ್ತಕ ಬಿಡುಗಡೆಯನ್ನು ಮಾತಿನಲ್ಲೇ ಮುಗಿಸಲು ನಿರ್ಧರಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟನೆಯಾಯ್ತು, ಮುಖ್ಯ ಅತಿಥಿಯ ಭಾಷಣ ಮುಗಿಯಿತು, ಆದರೆ ಪುಸ್ತಕ ಬಿಡುಗಡೆ ಲಕ್ಷಣ ಕಾಣಿಸಲಿಲ್ಲ. ಸಭಿಕರೇ ಈ ಬಗ್ಗೆ ಪ್ರಶ್ನಿಸಿದಾಗ, ಆಯೋಜಕರು ಗಡಿಬಿಡಿಯಲ್ಲಿ ಪುಸ್ತಕಗಳನ್ನು ಆಟೋದಲ್ಲಿ ಬಿಟ್ಟು ಬಂದಿರುವ ವಿಚಾರ ಬಹಿರಂಗವಾಗಿದೆ.
ಅಷ್ಟು ಹೊತ್ತಿಗೆ ಬಾಕ್ಸ್ ಹಿಡಿದ ಆಟೋ ಚಾಲಕ ರಮೇಶ್ ಸಭಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಟೋ ಹತ್ತಿದ ವ್ಯಕ್ತಿಗಾಗಿ ಕಣ್ಣಾಡಿಸಿದ್ದಾರೆ.
ಅಷ್ಟು ಹೊತ್ತಿಗೆ ಕಳೆದು ಹೋದ ಪುಸ್ತಕ ಸಿಕ್ಕಿದೆ ಅನ್ನುವ ಸುದ್ದಿ ಸಂಘಟಕರಿಗೆ ಗೊತ್ತಾಗಿದೆ. ಕೊನೆಗೆ ಅತಿಥಿಗಳು ಆಟೋ ಚಾಲಕನಿಂದಲೇ ಕೃತಿ ಲೋಕಾರ್ಪಣೆ ಮಾಡಿಸಿ ಗೌರವಿಸಿದರು.
ಸಮಯ ಪ್ರಜ್ಞೆಯಿಂದ ಸಕಾಲಕ್ಕೆ ಕೃತಿಗಳನ್ನು ಹೊತ್ತು ತಂದ ಆಟೋ ಚಾಲಕ ರಮೇಶ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾತ್ರವಲ್ಲದೇ ಕೃತಿ ಬಿಡುಗಡೆಗೊಳಿಸಿದ ಹಿರಿಮೆಗೂ ಪಾತ್ರರಾದರು.
ಈ ಘಟನೆ ಕುರಿತಂತೆ ಹರ್ಷ ವ್ಯಕ್ತಪಡಿಸಿರುವ ಪುಸ್ತಕ ಬಿಡುಗಡೆ ಮಾಡಬೇಕಾಗಿದ್ದ ಲೇಖಕ ಮಲ್ಲೇಪುರಂ ಜಿ. ವೆಂಕಟೇಶ್, ರಮೇಶ್ ಅವರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಮೇಶ್ “ನನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಪುಸ್ತಕಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದೆ. ನನ್ನ ಪ್ರಾಮಾಣಿಕತೆಗೆ ಪುಸ್ತಕ ಬಿಡುಗಡೆ ಸುಯೋಗ ಸಿಕ್ಕಿತು. ಜತೆಗೆ ಸನ್ಮಾನ ಭಾಗ್ಯವೂ ದೊರೆಯಿತು,’ ಎಂದು ಸಂತಸ ವ್ಯಕ್ತಪಡಿಸಿದರು.
Discussion about this post