ಮಡಿಕೇರಿ : ತನ್ನ 9ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಬಾಲಕಿ ಇದೀಗ ಗಂಡ ಹಾಗೂ ಮಕ್ಕಳೊಂದಿಗೆ ತಾಯಿ ಮುಂದೆ ಪ್ರತ್ಯಕ್ಷವಾಗಿದ್ದ ಘಟನೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.
ಮುದ್ರೆಮನೆಯ ಪೂರ್ಣೇಶ್ ಅವರ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರಾ ಮತ್ತು ಕಾಳಿ ಮುತ್ತು ದಂಪತಿಯ 5ನೇ ಪುತ್ರಿ ಅಂಜಲಿ ತನ್ನ 9ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದಳು. ಮನೆ ಸಮೀಪ ಟಿಂಬರ್ ಕೆಲಸಕ್ಕಾಗಿ ಬಂದಿದ್ದ ಆನೆ ಮಾವುತನ ಪರಿಚಯವಾಗಿ ಆತನೊಂದಿಗೆ ಕೇರಳಕ್ಕೆ ಹೋಗಿದ್ದಳು.
ಮಗಳು ಕಾಣೆಯಾಗುತ್ತಿದ್ದಂತೆ ತಂದೆ ತಾಯಿ ಸೇರಿ ಊರವರು ಹುಡುಕಾಟ ನಡೆಸಿದ್ದರು. ಆದರೆ ಮಗಳ ಪತ್ತೆ ಇಲ್ಲ. ಹೀಗಾಗಿ ಮಗಳ ನೆನಪಿನಲ್ಲೇ ಚೈತ್ರಾ ಕೊರಗುತ್ತಿದ್ದರು.
ಈ ನಡುವೆ ಅಂಜಲಿಯನ್ನು ಕೇರಳಕ್ಕೆ ಕರೆದುಕೊಂಡ ಹೋದಾತ ಮನೆಯಲ್ಲೇ ಇರಿಸಿಕೊಂಡಿದ್ದ. ಅಲ್ಲೇ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ಸಾಗಿಸುತ್ತಿದ್ದಳು. ಇದಾದ ಬಳಿಕ ಕೇರಳದ ನೆಲ್ಲಮಣಿಯ ಸಾಜಿ ಎಂಬುವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಸಾಜಿ ಮತ್ತು ಅಂಜಲಿಗೆ ಇದೀಗ ಮೂರು ಮಕ್ಕಳಿದ್ದಾರೆ.
ಕೆಲ ತಿಂಗಳ ಹಿಂದೆ ಮಂಗಳೂರು ಮುಸ್ತಫಾ ಅನ್ನುವವರು ಕೇರಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಂಜಲಿ ಮತ್ತು ಸಾಜಿ ದಂಪತಿಯ ಪರಿಚಯವಾಗಿದೆ. ಮುಸ್ತಫಾ ಕನ್ನಡಿಗರು ಎಂದು ತಿಳಿದ ದಂಪತಿ ಮೂಡಿಗೆಯಲ್ಲಿ ತನ್ನ ತಾಯಿ ಇರುವುದಾಗಿಯೂ ಅವರನ್ನು ಹುಡುಕುತ್ತಿರುವುದಾಗಿಯೂ ಹೇಳಿದ್ದಾರೆ.
ಈ ವಿಷಯ ಮುಸ್ತಫಾ ಅವರಿಂದ ಫಿಶ್ ಮೋನು ಅನ್ನುವವರಿಗೆ ತಿಳಿಯಿತು. ಅವರ ತಮ್ಮ ಸ್ನೇಹಿತರೊಂದಿಗೆ ಹುಡುಕಾಟ ನಡಸಿದಾಗ ಮೂಡಿಗೆರೆಯ ಲೋಕವಳ್ಳಿ ಗ್ರಾಮದ ಎಸ್ಟೇಟ್ ಒಂದರಲ್ಲಿ ಚೈತ್ರಾ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಬಳಿಕ ಅವಳು ಇವರ ಮಗಳು, ಇವರೇ ಅವಳ ತಾಯಿ ಅನ್ನುವುದನ್ನು ದೃಢಪಡಿಸಿದ್ದಾರೆ.
ಇದಾದ ಬಳಿಕ ಸೋಮವಾರ ಮಂಗಳೂರಿಗೆ ಆಗಮಿಸಿದ ಸಾಜಿ ದಂಪತಿ, ಮಂಗಳವಾರ ಹೆತ್ತ ತಾಯಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರಿಬ್ಬರು ಅಪ್ಪಿಕೊಂಡು ಕಣ್ಣೀರು ಹಾಕಿಸಿದ ದೃಶ್ಯ ಕಲ್ಲು ಹೃದಯವನ್ನು ಕರಗಿಸುವಂತಿತ್ತು.
ಮೂಲತಃ ತಮಿಳುನಾಡು ಮೂಲದವರಾದ ಚೈತ್ರಾ ಕುಟುಂಬ ಕಳೆದ 40 ವರ್ಷದ ಹಿಂದೆ ಮೂಡಿಗೆರೆಗೆ ಬಂದಿದ್ದರು. ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ವಾಸವಾಗಿದ್ದು, ನಂತರ ಹೊಟ್ಟೆಪಾಡಿಗಾಗಿ ಕುಟುಂಬ ಎಸ್ಟೇಟ್ ನಿಂದ ಎಸ್ಟೇಟ್ ಗೆ ವಲಸೆ ಹೋಗುತ್ತಿತ್ತು. ಚೈತ್ರಾ ಅವರಿಗೆ ಒಟ್ಟು 11 ಮಕ್ಕಳಿದ್ದು, ಎಲ್ಲರೂ ತಮ್ಮ ಬದುಕು ಕಟ್ಟಿಕೊಂಡಿದ್ದು, ಚೈತ್ರಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
Discussion about this post