ಚಂದನವನದ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ.
ಅಕ್ಷಯ ತೃತೀಯ ದಿನವಾದ ಇಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ.
ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.
ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು ಜನಿಸಿತ್ತು. ಆದರೆ ಮಗುವಿನ ಫೋಟೋವನ್ನು ಇಲ್ಲಿಯವರೆಗೆ ಬಹಿರಂಗಪಡಿಸಿರಲಿಲ್ಲ. ಅವರ ಮುದ್ದಾದ ಮಗುವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಮತ್ತೊಂದು ಕಡೆ ಯಶ್ ಕೂಡಾ ಮಗಳ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೀವು ಹೇಳಿದ್ದೇ ಸರಿ…. ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ ಅಂದಿದ್ದಾರೆ.
ಸಾಮಾನ್ಯವಾಗಿ ಎಲ್ಲರಿಗೂ ಒಂದು ಕುತೂಹಲ ಇರುತ್ತದೆ. ಮಗಳು ಅಪ್ಪನ ತರಹ ಇದ್ದಾಳೋ, ಅಮ್ಮನ ತರಹ ಇದ್ದಾಳೆಯೇ ಎಂಬುದು. ಈಗ ಅಭಿಮಾನಿಗಳು ರಾಧಿಕಾ ಪಂಡಿತ್ ಮತ್ತು ಯಶ್ ಮುದ್ದಿನ ಮಗಳನ್ನು ಅವರ ತಂದೆ ತಾಯಿಗೆ ಹೋಲಿಸಿ ನೋಡುತ್ತಿದ್ದಾರೆ. ನೀವು ಏನಂತೀರಾ? ರಾಧಿಕಾ ಪಂಡಿತ್ ಮತ್ತು ಯಶ್ ಮಗಳು ಯಾರ ತರಹ ಇದ್ದಾಳೆ?
Discussion about this post