ಕೊರೋನಾ ಆತಂಕದ ನಡುವೆ ಭಾರತಕ್ಕೆ ಶುಭಸುದ್ದಿಯೊಂದು ಬಂದಿದೆ. ಭಾರತದ ತಾರಾ ಕುಸ್ತಿ ಪಟು ಚಿನ್ನದ ಪದಕ ಗೆದ್ದಿದ್ದಾರೆ.
ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್ ಕುಸ್ತಿ ಟೂರ್ನಿಯ ಮಹಿಳೆಯರ 53 ಕೆಜಿ ವಿಭಾಗದ ಫೈನಲ್ ನಲ್ಲಿ ಉಕ್ರೇನಿನ ಕ್ರಿಸ್ಟಿಯಾನ ಬ್ರೀಜಾ ಅವರನ್ನು ಮಣಿಸಿರುವ ವಿನೇಶ್ ಫೋಗಟ್ ಚಿನ್ನದ ಪದಕ ಜಯಿಸಿದ್ದಾರೆ.
ಎದುರಾಳಿ ಬ್ರೀಜಾ ಅವರನ್ನು 8-0 ಪಾಯಿಂಟ್ ಗಳಿಂದ ಸೋಲಿಸಿರುವ 26 ವರ್ಷದ ಫೋಗಟ್ ಈ ಋತುವಿನ ಮೂರನೇ ಚಿನ್ನದ ಪದಕವನ್ನು ತಮ್ಮದಾಗಿಸಿದ್ದಾರೆ. ಈ ಹಿಂದೆ ಮಾರ್ಚ್ ನಲ್ಲಿದ ಮೆಟ್ಟಿಯೂ ಪೆಲಿಕಾನ್ ಇವೆಂಟ್ ಹಾಗೂ ಏಪ್ರಿಲ್ ನಲ್ಲಿ ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಟೊಕೀಯೊ ಒಲಿಂಪಿಕ್ಸ್ ಗೆ ತೆರಳಲಿರುವ ನಾಲ್ವರು ಕುಸ್ತಿ ಪಟುಗಳಾದ ವಿನೇಶ್ ಪೋಗಟ್, ಅಂನ್ಶುಮಲಿಕ್, ರವಿಕುಮಾರ್ ದಹಿಯಾ ಹಾಗೂ ದೀಪಕ್ ಪುನಿಯಾ ಅವರು ಪೊಲೆಂಡ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಈ ಕುಸ್ತಿ ಟೂರ್ನಿಯಲ್ಲಿ ಭಾರತಕ್ಕೆ ಇದು 2ನೇ ಪದಕವಾಗಿದ್ದು, ಬುಧವಾರ ನಡೆದಿದ್ದ ಪುರುಷರ 61 ಕೆ.ಜಿ.ವಿಭಾಗದಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದಿದ್ದರು.
ಹಾಗೇ ನೋಡಿದರೆ ಭಾರತ ಮತ್ತಷ್ಟು ಪದಕ ಗೆಲ್ಲುವ ಸಾಧ್ಯತೆಗಳಿತ್ತು, ಆದರೆ ಭಾರತ ತಂಡದ ಮತ್ತೊಬ್ಬ ಸದಸ್ಯೆ ಅಂನ್ಶು ಮಲಿಕ್ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಪ್ರಸ್ತುತ ಕೊರೋನಾ ವರದಿಗಾಗಿ ಎದುರು ನೋಡುತ್ತಿರುವ ಅವರು ಐಸೋಲೇಷನ್ ಗೆ ಒಳಗಾಗಿದ್ದಾರೆ. 57 ಕೆಜೆ ವಿಭಾಗದಲ್ಲಿ ಇವರು ಸ್ಪರ್ಧಿಸಬೇಕಿತ್ತು.
ಇನ್ನು ಮಂಗಳವಾರ, ಪುರುಷರ 86 ಕೆಜಿ ವಿಭಾಗದ ದೀಪಕ್ ಪುನಿಯಾ ಕಾಲಿನ ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಇನ್ನೆರೆಡು ಪದಕಗಳನ್ನು ನಾವು ನಿರೀಕ್ಷೆ ಮಾಡಬಹುದಿತ್ತು.
Discussion about this post