ಕೇರಳ : ಅಳಪ್ಪುಜ್ಹ ನ್ಯಾಯಾಲಯದಲ್ಲಿ ಎರಡೂವರೆ ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದವಳು ನಕಲಿ ವಕೀಲೆ ಅನ್ನುವುದು ಇದೀಗ ಬೆಳಕಿಗೆ ಬಂದಿದೆ. ಆದರೆ ಆಕೆ ನಕಲಿ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಕೋರ್ಟ್ ಆವರಣಕ್ಕೆ ಬಂದಿದ್ದು, ಅಷ್ಟು ಹೊತ್ತಿಗೆ ಆಕೆ ಕೋರ್ಟ್ ಆವರಣದಿಂದ ಪರಾರಿಯಾಗಿದ್ದಾಳೆ.
ಕುಟ್ಟುನಾಡು ಮೂಲದ ಸೆಸ್ಸಿ ಗ್ಸೇವಿಯರ್ (27), ಗುರುವಾರ ಕೋರ್ಟ್ ಆವರಣಕ್ಕೆ ಬರುತ್ತಿದ್ದಂತೆ ಅಳಪ್ಪುಜ್ಹ ಉತ್ತರ ಠಾಣೆಯ ಪೊಲೀಸರು ಕಾಯುತ್ತಿದ್ದಾರೆ ಅನ್ನುವ ಸುಳಿವು ಸಿಕ್ಕಿದೆ. ಹೀಗಾಗಿ ಕೆಲ ವಕೀಲರ ಸಹಾಯದೊಂದಿಗೆ ಆಕೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಅಂದ ಹಾಗೇ ಎರಡೂವರೆ ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ ಸೆಸ್ಸಿ ಗ್ಸೇವಿಯರ್ ಬಾರ್ ಕೌನ್ಸಿಲ್ ನಲ್ಲಿ ಹೆಸರು ನೋಂದಾಯಿಸಿಕೊಂಡಿರಲೇ ಇಲ್ಲ. ಆದರೆ ನಕಲಿ ಸರ್ಟಿಫಿಕೆಟ್, ನಕಲಿ ರೂಲ್ ನಂಬರ್ ಗಳನ್ನು ವಕೀಲರ ಸಂಘಕ್ಕೆ ಕೊಟ್ಟಿದ್ದ ಆಕೆ ಹಿರಿಯ ವಕೀಲರನ್ನೇ ಈ ಮೂಲಕ ಯಾಮಾರಿಸಿದ್ದಳು. ಅಷ್ಟೇ ಅಲ್ಲದೆ ಈಕೆ ವಕೀಲರ ಸಂಘದ ಚುನಾವಣೆಗೆ ಸ್ಪರ್ಧಿಸಿ ದೊಡ್ಡ ಅಂತರದೊಂದಿಗೆ ವಿಜಯಿಯಾಗಿದ್ದಳು. ಚುನಾವಣೆಯಲ್ಲಿ ಗೆದ್ದ ಬಳಿಕ ಈಕೆಗೆ ಗ್ರಂಥಾಲಯದ ಜವಾಬ್ದಾರಿ ನೀಡಲಾಗಿತ್ತು.
ಇದೇ ಸಂದರ್ಭದಲ್ಲಿ ವಕೀಲರ ಸಂಘಕ್ಕೆ ಈಕೆ ಅಸಲಿತನ ಕುರಿತಂತೆ ಅನಾಮಧೇಯ ಪತ್ರವೊಂದು ಬಂದಿದೆ.ಜೊತೆಗೆ ಪರಿಶೀಲನೆ ನಡೆಸಿದಾಗ ಗ್ರಂಥಲಾಯದಿಂದ ಹಲವು ಪುಸ್ತಕ, ಕಡತಗಳು ಮಾಯವಾಗಿತ್ತು. ಹೀಗಾಗಿ ಹಿರಿಯ ವಕೀಲರಿಗೆ ಈಕೆ ನಕಲಿ ವಕೀಲೆ ಅನ್ನುವ ವಾಸನೆ ಬಂದಿದೆ. ಹೀಗಾಗಿಯೇ ಬಾರ್ ಕಾನ್ಸಿಲ್ ನ ನೋಂದಾವಣೆ ಪತ್ರವನ್ನು ನೀಡುವಂತೆ ಸೂಚಿಸಿದ್ದಾರೆ. ಆಕೆ ಕೊಟ್ಟ ನೋಂದಣಿಯನ್ನು ಕೇರಳ ಬಾರ್ ಕೌನ್ಸಿಲ್ ನಲ್ಲಿ ಪರಿಶೀಲನೆ ನಡೆಸಿದ್ರೆ ಅದು ಮತ್ತೊಬ್ಬರಿಗೆ ಸೇರಿದ ಸಂಖ್ಯೆಯಾಗಿತ್ತು.
ಹೀಗಾಗಿ ಅಳಪ್ಪುಜ್ಹ ವಕೀಲರ ಸಂಘ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಅದರಂತೆ ದೂರು ದಾಖಲಿಸಿಕೊಂಡ ಪೊಲೀಸರು ಬಂಧಿಸಲು ಹೋದ್ರೆ ಆಕೆ ಪರಾರಿಯಾಗಿದ್ದಾಳೆ. ಅಂದ ಹಾಗೇ ಈಕೆ ಈಗಾಗಲೇ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾದ ಬೇರೆ ಮಂಡಿಸಿದ್ದಾಳಂತೆ.
Discussion about this post