ಬಹುತೇಕ ಸಂದರ್ಭದಲ್ಲಿ ವೈದ್ಯರ ಬಳಿಗೆ ಇಂಜೆಕ್ಷನ್ ಪಡೆಯಲು ಹೋದರೆ ಕುಂಡಿಗೆ ಇಂಜೆಕ್ಷನ್ ಚುಚ್ಚುತ್ತಾರೆ. ಆದರೆ ಕೊರೋನಾ ಲಸಿಕೆಯನ್ನು ಮಾತ್ರ ವಿಶ್ವದ ಎಲ್ಲಾ ಕಡೆಗಳಲ್ಲಿ ತೋಳಿಗೆ ಚುಚ್ಚಲಾಗುತ್ತಿದೆ. ಅರೇ ಕುಂಡಿಗೆ ಇಂಜೆಕ್ಷನ್ ಚುಚ್ಚೋ ಬದಲು ತೋಳಿಗ್ಯಾಕೆ ಚುಚ್ಚೋದು ಅನ್ನೋ ಪ್ರಶ್ನೆ ಈಗ ಬಹುತೇಕ ಮಂದಿಯನ್ನು ಕಾಡುತ್ತಿದೆ.
ಈ ಪ್ರಶ್ನೆಗೆ ಇದೀಗ ಅಮೆರಿಕಾದ ವೈದ್ಯರು ಉತ್ತರಿಸಿದ್ದು, ಕೊರೋನಾ ಲಸಿಕೆಯನ್ನು ಕುಂಡಿಗೆ ಚುಚ್ಚಿದ್ರೆ ಆ ಭಾಗದಲ್ಲಿ ಮಾತ್ರ ಊತ ಕಾಣಿಸಿಕೊಂಡು ಕಿರಿ ಕಿರಿಯಾಗುವ ಸಾಧ್ಯತೆಗಳಿದೆ. ಕೊಬ್ಬಿನಂಶ ಹೆಚ್ಚಿರುವ ಜಾಗಕ್ಕೆ ರಕ್ತ ಸಂಚಾರ ಕಡಿಮೆ ಇರುವುದರಿಂದ ಲಸಿಕೆಯ ಅಂಶ ಸೇರುವ ಸಾಧ್ಯತೆ ಕೂಡಾ ಕಡಿಮೆ ಇರುತ್ತದೆ ಈ ಕಾರಣಕ್ಕಾಗಿ ತೋಳಿಗೆ ಕೊರೋನಾ ಲಸಿಕೆಯನ್ನು ಚುಚ್ಚಲಾಗುತ್ತದೆಯಂತೆ.
ಇನ್ನು ತೋಳಿನಲ್ಲಿ ದುಗ್ಧರಸ ಗ್ರಂಥಿ ತೋಳಿನ ಬಳಿ ಹೆಚ್ಚಿರುತ್ತದೆ. ಈ ಕಾರಣದಿಂದ ತೋಳಿಗೆ ಲಸಿಕೆ ನೀಡಲಾಗುತ್ತದೆಯಂತೆ. ಇದರೊಂದಿಗೆ ಬಹುತೇಕ ಲಸಿಕೆಗಳನ್ನು ಮಾಂಸ ಖಂಡಗಳಿಗೆ ಮಾತ್ರ ನೀಡಬೇಕು. ಅದೇ ರೀತಿ ಕೊರೋನಾ ಲಸಿಕೆ ಕೂಡಾ. ಮಾಂಸಖಂಡಗಳ ಟಿಶ್ಯೂಗಳಲ್ಲಿ ಮಹತ್ವದ ರೋಗ ನಿರೋಧಕ ಜೀವ ಕೋಶಗಳಿರುತ್ತದೆ. ಈ ರೋಗ ನಿರೋಧಕ ಜೀವ ಕೋಶಗಳು ಇಂಜೆಕ್ಷನ್ ಮೂಲಕ ಬಂದ ಪ್ರತಿಕಾಯಗಳನ್ನು ಗುರುತಿಸಿ ಜೀವ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಲು ಪ್ರಾರಂಭಿಸುತ್ತದೆ ಅನ್ನುತ್ತಾರೆ ವಿಜ್ಞಾನಿಗಳು.
ಮತ್ತೊಂದು ಕಾರಣ, ಪ್ರತೀ ಸಲ ಪ್ಯಾಂಟ್ ಕಳಚಿ ಲಸಿಕೆ ನೀಡಿದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಜೊತೆಗೆ ಪ್ಯಾಂಟ್ ಬಿಚ್ಚುವ ಸಲುವಾಗಿ ಪ್ರತ್ಯೇಕ ಕೊಠಡಿಯೂ ಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಶರ್ಟ್ ಮೇಲೆತ್ತಿ, ತೋಳಿಗೆ ಲಸಿಕೆ ಚುಚ್ಚುವುದರಿಂದ ಸಾಕಷ್ಟು ಸಮಯವೂ ಉಳಿತಾಯವಾಗುತ್ತದೆ ಅನ್ನುವುದು ತಜ್ಞರ ವಾದ.
Discussion about this post