ನವದೆಹಲಿ : ಟೋಕಿಯೋ ಒಲಿಂಪಿಕ್ಸ್ ಮುಗಿಸಿ ಭಾರತಕ್ಕೆ ಹಿಂದುರಿಗಿದ ಕುಸ್ತಿಪಟು ವಿನೇಶಾ ಪೋಗಟ್ ಅವರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಟೋಕಿಯೋದಲ್ಲಿ ತೋರಿದ ಆಶಿಸ್ತಿಗೆ ಸರಿಯಾದ ಶಿಕ್ಷೆಯನ್ನೇ ನೀಡಲಾಗಿದೆ. ಮೇಲ್ನೋಟಕ್ಕೆ ಅಶಿಸ್ತು ಸಾಬೀತಾಗಿರುವ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಭಾರತ ಕುಸ್ತಿ ಫೆಡರೇಷನ್ ಆದೇಶ ಹೊರಡಿಸಿದೆ. ಜೊತೆಗೆ ವಿವರಣೆ ಕೇಳಿ ನೋಟಿಸ್ ಕೂಡಾ ಕೊಡಲಾಗಿದೆ.
ಅಮಾನತು ಆದೇಶ ಪ್ರಕಾರ ಮುಂದಿನ ಆದೇಶದ ತನಕ ಅವರು ಯಾವುದೇ ಕುಸ್ತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ರಾಷ್ಟ್ರೀಯ ಮತ್ತು ಇತರ ದೇಶಿ ಟೂರ್ನಿಗಳಲ್ಲೂ ಸ್ಪರ್ಧಿಸುವಂತಿಲ್ಲ. ಜೊತೆಗೆ ಪೋಗಟ್ ಅವರಿಗೆ ನೋಟಿಸ್ ನೀಡಿರುವ ಕುಸ್ತಿ ಫೆಡರೇಷನ್ ಆಗಸ್ಟ್ 16ರೊಳಗೆ ಉತ್ತರ ನೀಡುವಂತೆ ಆದೇಶಿಸಿದೆ,
ಅಥ್ಲೀಟ್ಗಳನ್ನು ಹದ್ದುಬಸ್ತಿನಲ್ಲಿಡಲು ವಿಫಲವಾಗಿರುವ ಡಬ್ಲ್ಯುಎಫ್ಐ ವಿರುದ್ಧ ಇತ್ತೀಚೆಗೆ ಕಿಡಿಕಾರಿದ್ದ ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ), ನೋಟಿಸ್ ಕೂಡ ಜಾರಿ ಮಾಡಿತ್ತು ಎಂದು ಹೇಳಲಾಗಿದೆ.
ಆಗಿದ್ದೇನು…?
ಒಲಿಂಪಿಕ್ ಗೂ ಮುನ್ನ ಹಂಗರಿಯಲ್ಲಿ ತರಬೇತಿ ಪಡೆಯುತ್ತಿದ್ದ ಪೋಗಟ್ ನೇರವಾಗಿ ಟೋಕಿಯೊಗೆ ಬಂದಿದ್ದರು. ಈ ವೇಳೆ ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ತಗಾದೆ ತೆಗೆದಿದ್ದ ಅವರು ಭಾರತದ ಇತರ ಕುಸ್ತಿಪಟುಗಳ ಜೊತೆಯಲ್ಲಿ ಅಭ್ಯಾಸ ಮಾಡುವುದಿಲ್ಲ ಎಂದು ಕ್ಯಾತೆ ತೆಗೆದಿದ್ದರು. ಕ್ರೀಡಾ ಗ್ರಾಮದಲ್ಲಿ ಸೋನಮ್ ಮಲಿಕ್, ಅನ್ಶು ಮಲಿಕ್ ಮತ್ತು ಸೀಮಾ ಬಿಸ್ಲಾ ಉಳಿದುಕೊಂಡಿದ್ದ ಕೊಠಡಿಯ ಸನಿಹದಲ್ಲೇ ವಿನೇಶಾಗೂ ಕೊಠಡಿ ನೀಡಲಾಗಿತ್ತು. ನೀವು ಭಾರತದಿಂದ ಬಂದಿದ್ದೀರಿ. ನಿಮ್ಮಿಂದ ನನಗೆ ಕೊರೊನಾ ಬರಬಹುದು, ಹೀಗಾಗಿ ನಾನು ಇಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ಜಗಳ ತೆಗೆದಿದ್ದರಂತೆ.
ಜೊತೆಗೆ ಭಾರತ ತಂಡಕ್ಕೆ ಶಿವ್ ನರೇಶ್ ಸಂಸ್ಥೆ ಪ್ರಾಯೋಜಕತ್ವ ಮಾಡಿದ್ದ ಪೋಷಾಕನ್ನು ಪೋಗಾಟ್ ಧರಿಸಿರಲಿಲ್ಲ ಬದಲಾಗಿ ನೈಕಿ ಸಂಸ್ಥೆಯ ಲಾಂಛನವಿರುವ ಪೋಷಾಕು ತೊಟ್ಟಿದ್ದರು ಇದು ಕೂಡಾ ಆಶಿಸ್ತಿನ ಭಾಗವಾಗಿದೆ.
ಇಷ್ಟೆಲ್ಲಾ ಕಿರಿಕ್ ನಡುವೆ ಕ್ವಾರ್ಟರ್ ಫೈನಲ್ ತಲುಪಿದ್ದ ವಿನೇಶ್ ಪದಕದ ನಿರೀಕ್ಷೆ ಮೂಡಿಸಿದ್ದರು. ಆದರೆ ಕ್ವಾರ್ಟರ್ ಫೈನಲ್ನಲ್ಲೇ ಅವರು ಮುಗ್ಗರಿಸಿದರು.
Discussion about this post