ಮಾಸ್ಕೋ : ಉಕ್ರೇನ್ ನಡೆಯ ಬಗ್ಗೆ ಅಸಮಾಧಾನಗೊಂಡಿರುವ ನೆರೆಯ ರಷ್ಯಾ, ಯುದ್ದದ ಮೂಲಕ ಉಕ್ರೇನ್ ಮಣಿಸಲು ಮುಂದಾಗಿದೆ. ಈ ಸಂಬಂಧ ಸೇನೆಯ ಶೇ70ರಷ್ಟನ್ನು ರಷ್ಯಾ ಯುದ್ಧಕ್ಕೆ ಸಜ್ಜುಗೊಳಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ವರದಿ ಮಾಡಿವೆ. ಈ ನಡುವೆ ಈಗಾಗಲೇ ಉಕ್ರೇನ್ ಗಡಿಯಲ್ಲಿ ರಷ್ಯಾದ ಲಕ್ಷಕ್ಕೂ ಹೆಚ್ಚು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಜಮಾವಣೆಗೊಳಿಸಲಾಗಿದೆ.
ಒಂದು ವೇಳೆ ಅಮೆರಿಕಾ ಗುಪ್ತಚರ ಪಡೆಯ ಎಚ್ಚರಿಕೆಯಂತೆ ಯುದ್ಧ ನಡೆದರೆ 50 ಸಾವಿರ ನಾಗರಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿದೆ ಎನ್ನಲಾಗಿದೆ. ಈ ಭೀತಿಯ ನಡುವೆ ಒಂದು ವೇಳೆ ಯುದ್ಧವಾದರೆ ರಷ್ಯಾದ ಮೇಲೆ ಪ್ರತಿ ದಾಳಿ ನಡೆಸಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ ಘೋಷಣೆ ಮಾಡಿದೆ. ಆದರೆ ನ್ಯಾಟೋ ಪಡೆಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ 2 ಸಾವಿರ ಯೋಧರನ್ನು ಯುರೋಪ್ ಗೆ ಅಮೆರಿಕಾ ಕಳುಹಿಸಿಕೊಟ್ಟಿದೆ.
ಹಾಗಾದ್ರೆ ರಷ್ಯಾ ಮತ್ತು ಉಕ್ರೇನ್ ನಡುವೆ ಬಿಕ್ಕಟ್ಟಿಗೆ ಕಾರಣವೇನು ಅನ್ನುವುದನ್ನು ಗಮನಿಸುವುದಾದ್ರೆ, ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಯುಕ್ರೇನ್ ಯುರೋಪ್ ಒಕ್ಕೂಟದ ಕಡೆಗೆ ವಾಲುತ್ತಿರುವುದು ರಷ್ಯಾದ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ಉಕ್ರೇನ್ ಗೆ ನ್ಯಾಟೋದ ಪಾಲುದಾರ ಅನ್ನುವ ಸ್ಥಾನಮಾನ ನೀಡುವ ಪ್ರಸ್ತಾಪ ಕೂಡಾ ರಷ್ಯಾದ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಈ ಪ್ರಸ್ತಾಪ ಹಿಂಪಡೆಯಬೇಕು ಅನ್ನುವುದು ರಷ್ಯಾದ ಬೇಡಿಕೆ. ನ್ಯಾಟೋ ದೇಶಗಳು ಉಕ್ರೇನ್ ಗೆ ಮಿಲಿಟರಿ ನೆರವು ನೀಡುತ್ತಿರುವುದನ್ನು ಸಹಿಸಲು ರಷ್ಯಾಗೆ ಸಾಧ್ಯವಾಗುತ್ತಿಲ್ಲ.
ಉಕ್ರೇನ್ ನಲ್ಲಿ ತನ್ನ ಕೈಗೊಂಬೆ ಸರ್ಕಾರ ರಚಿಸಬೇಕು ಅನ್ನುವುದು ರಷ್ಯಾದ ತಂತ್ರ. ಆದರೆ ಇದಕ್ಕೆ ಅಮೆರಿಕಾ ಹಾಗೂ ಯುರೋಪ್ ದೇಶಗಳು ಅಡ್ಡಿಯಾಗಿದೆ.
Discussion about this post