ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿದ ಬೆನ್ನಲ್ಲೇ ಬ್ರಿಟನ್ ಕೂಡಾ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಲು ನಿರ್ಧರಿಸಿದೆ. ನವೆಂಬರ್ 22 ರಿಂದ ಬ್ರಿಟನ್ಗೆ ಆಗಮಿಸುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ರೆ ಐಸೊಲೇಷನ್ಗೆ ಒಳಪಡುವ ಅವಶ್ಯಕತೆ ಇರೋದಿಲ್ಲ
ಈ ಹಿಂದೆ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರು ಲಂಡನ್ ನೆಲಕ್ಕೆ ಕಾಲಿಟ್ಟ ಬೆನ್ನಲ್ಲೇ ಐಸೋಲೇಷನ್ ಗೆ ಒಳಪಡಬೇಕಾಗಿತ್ತು. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿಂದೆ ಲಂಡನ್ ಮೂಲದ ಕೋವಿಶೀಲ್ಡ್ ಲಸಿಕೆಯ ಬಗ್ಗೆಯೂ ಕ್ಯಾತೆ ತೆಗೆದಿದ್ದ ಲಂಡನ್, ಭಾರತದಿಂದ ಬಂದವರನ್ನು ಕ್ವಾರಂಟೈನ್ ಗೆ ಹಾಕುತ್ತಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಭಾರತ ಲಂಡನ್ ನಿಂದ ವಿಮಾನ ಮೂಲಕ ಬಂದವರು 14 ದಿನ ಕ್ವಾರಂಟೈನ್ ನಲ್ಲಿರಬೇಕು ಅನ್ನುವ ಆದೇಶ ಹೊರಡಿಸಿದ ಬಳಿಕ ಕೋವಿಶೀಲ್ಡ್ ಲಸಿಕೆಯನ್ನು ಲಂಡನ್ ಒಪ್ಪಿಕೊಂಡಿತ್ತು.
ಭಾರತ್ ಬಯೋಟೆಕ್ (Bharat Biotech) ಸಂಶೋಧಿಸಿರುವ ಕೋವ್ಯಾಕ್ಸಿನ್ (Covaxin) ಲಸಿಕೆಯ ತುರ್ತು ಬಳಕೆಗೆ ಮಾನ್ಯತೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸುದೀರ್ಘ ಸಮಯ ತೆಗೆದುಕೊಂಡಿತ್ತು. ಹಲವು ಸುತ್ತಿನ ದಾಖಲೆ ಸಲ್ಲಿಕೆ ಬಳಿಕ 18 ವರ್ಷದ ಮೇಲಿನ ಎಲ್ಲ ವಯೋಮಾನದವರಿಗೆ 2 ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿತ್ತು..
ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಭಾರತ್ ಬಯೋಟೆಕ್ ಮನವಿ ಸಲ್ಲಿಸಿತ್ತು. ನವೆಂಬರ್ 3 ರಂದು ಹಸಿರು ಅನುಮತಿ ನೀಡಲಾಗಿತ್ತು. ಭಾರತದ ಸ್ವದೇಶಿ ಲಸಿಕೆ ಕೊರೋನಾ ಸೋಂಕಿನ ವಿರುದ್ಧ ಶೇ. 77.8ರಷ್ಟು ಪರಿಣಾಮಕಾರಿಯಾಗಿದ್ದು, ಡೆಲ್ಟಾ ರೂಪಾಂತರಿ ವೈರಸ್ ವಿರುದ್ಧ ಶೇ. 65.2ರಷ್ಟು ಪರಿಣಾಮಕಾರಿಯಾಗಿದೆ.
Discussion about this post