ಟೊಕೀಯೋ : ಒಲಿಂಪಿಕ್ಸ್ನಲ್ಲಿ ಇಂದು ಭಾರತದ ಪಾಲಿಗೆ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಜಾವಲಿನ್ ಎಸೆತದಲ್ಲಿ ಹರಿಯಾಣ ಮೂಲದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ನೀರಜ್ ದಾಖಲಿಸಿದ್ದಾರೆ. ಒಲಿಂಪಿಕ್ಸ್ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕವನ್ನು ತಂದು ಕೊಟ್ಟ ಕೀರ್ತಿ ನೀರಜ್ ಅವರಿಗೆ ಸಲ್ಲುತ್ತದೆ.
ಇನ್ನು ಚಿನ್ನದ ಹುಡುಗ ನೀರಜ್ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ‘ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಇತಿಹಾಸ ಬರೆದಿದೆ. ನೀರಜ್ ಚೋಪ್ರಾ ಅವರ ಇಂದಿನ ಸಾಧನೆ ಅವಿಸ್ಮರಣೀಯ. ಅವರ ಸಾಧನೆ ಮತ್ತು ಉತ್ಸಾಹ ಎಲ್ಲರಿಗೂ ಪ್ರೇರಣೆ. ಚಿನ್ನ ಗೆದ್ದ ನೀರಜ್ ಅವರಿಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪ್ರಶಂಸಿಸಿದ್ದಾರೆ.
ಈ ನಡುವೆ ಹರಿಯಾಣ ಸರ್ಕಾರ ನೀರಜ್ ಸಾಧನೆಯನ್ನು ಮೆಚ್ಚಿ 6 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದೆ.
Discussion about this post