ಸೌಜನ್ಯ ಪರವಾಗಿರುವವರು, ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಲೆಂದು ಬಯಸುವವರು ಈ ಪ್ರತಿಭಟನೆ ಪಾಲ್ಗೊಳ್ಳ ಬಹುದಾಗಿದೆ
ಬೆಳ್ತಂಗಡಿ : ದಶಕಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಎಡವಿದೆ. ಪೊಲೀಸರು ಆರೋಪಿ ಎಂದು ಗುರುತಿಸಿದ ವ್ಯಕ್ತಿ ಆರೋಪಿಯಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಹಾಗಾದ್ರೆ ಆರೋಪಿಗಳು ಯಾರು ಅನ್ನುವುದು ಇನ್ನೂ ನಿಗೂಢ. ತನಿಖೆಯ ಲೋಪದಿಂದ ಅಮಾಯಕ ಹೆಣ್ಣು ಮಗಳೊಬ್ಬಳ ಬರ್ಬರ ಸಾವಿಗೆ ಉತ್ತರವೇ ಇಲ್ಲದಂತಾಗಿದೆ.
ಈ ನಡುವೆ ಸೌಜನ್ಯ ಸಾವಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಮೈಸೂರು, ಬೆಂಗಳೂರು ಬಳಿಕ ಇದೀಗ ದಕ್ಷಿಣ ಕನ್ನಡದಲ್ಲಿ ಪ್ರಾರಂಭವಾಗಿದೆ. ಇದರ ಮೊದಲ ಭಾಗವಾಗಿ ಆಗಸ್ಟ್ 8 ರಂದು ಸುಳ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿಯ ಮಹೇಶ್ ಶೆಟ್ಟಿ ತಿಮರೋಡಿ ಘೋಷಿಸಿದ್ದಾರೆ.

ಆಗಸ್ಟ್ 8 ರಂದು ಸುಳ್ಯದ ಮುರುಳ್ಯದಿಂದ ಬೆಳಗ್ಗೆ 9 ಗಂಟೆಗೆ ಬೃಹತ್ ವಾಹನ ಜಾಥಾ ನಡೆಯಲಿದ್ದು, ಸುಳ್ಯದ ಜ್ಯೋತಿ ಸರ್ಕಲ್ ನಲ್ಲಿ ಸಮಾಪನಗೊಳ್ಳಲಿದೆ. ಜ್ಯೋತಿ ಸರ್ಕಲ್ ನಿಂದ ಕಾಲ್ನಡಿಗೆ ಜಾಥಾ ಪ್ರಾರಂಭವಾಗಲಿದ್ದು, ಸುಳ್ಯದ ಹಳೆ ಬಸ್ ಸ್ಟ್ಯಾಂಡ್ ತನಕ ಸಾಗಲಿದೆ. ಅಲ್ಲೇ ಬೃಹತ್ ಸಭೆಯನ್ನು ಆಯೋಜಿಸಲಾಗಿದ್ದು, ಸೌಜನ್ಯ ಸಾವಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಲಾಗುತ್ತದೆ.
Discussion about this post