ಮುಂಬೈ : ನೀಲಿ ಚಿತ್ರ ಆರೋಪದಡಿಯಲ್ಲಿ ಗಂಡನ ಬಂಧನವಾದ ಬೆನ್ನಲ್ಲೇ ನ್ಯಾಯಾಲಯದ ಮೂಲಕ ಮಾಧ್ಯಮಗಳನ್ನು ಕಟ್ಟಿ ಹಾಕಲು ಮುಂದಾದ ಶಿಲ್ಪಾ ಶೆಟ್ಟಿಯವರಿಗೆ ಹಿನ್ನಡೆಯಾಗಿದೆ. ಇದಾದ ಬಳಿಕ ಮೆತ್ತಗಾಗಿರುವ ಶಿಲ್ಪಾ ಶೆಟ್ಟಿ ನಮ್ಮ ಖಾಸಗಿತನವನ್ನು ಜನರು ಗೌರವಿಸಬೇಕು, ತಾಯಿಯಾಗಿ ಕೇಳಿಕೊಳ್ಳುತ್ತಿದ್ದೇನೆ, ಗೌಪತ್ಯೆಯನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಬಗ್ಗೆ ಮಾಧ್ಯಮಗಳು ಮತ್ತು ಕೆಲವರು ವಿನಾಕಾರಣ ಆರೋಪಗಳನ್ನು ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೇವಲ ನನ್ನ ಬಗ್ಗೆ ಮಾತ್ರವಲ್ಲ, ನನ್ನ ಕುಟುಂಬದ ಬಗ್ಗೆಯೂ ಟ್ರೋಲ್ ಗಳು ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ, ಹೇಳಿಕೆಯನ್ನೂ ನೀಡಿಲ್ಲ. ಹೀಗಾಗಿ ನನ್ನ ಹೆಸರನ್ನು ಬಳಸಿ ಸುಳ್ಳು ಹೇಳಿಕೆಗಳನ್ನು ನೀಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ನನಗೆ ಮುಂಬೈ ಪೊಲೀಸ್ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆಯಿದೆ ಅಂದಿದ್ದಾರೆ.
ಅರೆಬೆಂದ ವಿಷಯಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಕಮೆಂಟ್ ಮಾಡಬೇಡಿ. ಕಾನೂನಿಗೆ ತಲೆ ಬಾಗುವ ಪ್ರಜೆ ನಾನು. ಕಳೆದ 29 ವರ್ಷದಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದನ್ನು ಹುಸಿಯಾಗಿಸಲು ನಾನು ಬಿಡೋದಿಲ್ಲ. ನಮ್ಮ ಕುಟುಂಬದ ಖಾಸಗಿತನವನ್ನು ಈ ಸಮಯದಲ್ಲಿ ಗೌರವಿಸಿ ಎಂದು ನಾನು ಕೇಳಿಕೊಳ್ಳುತ್ತೇನೆ. ಮಾಧ್ಯಮಗಳ ವಿಚಾರಣೆ ನಮಗೆ ಬೇಕಿಲ್ಲ. ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿ. ಸತ್ಯಮೇವ ಜಯತೆ’ ಎಂದು ತಮ್ಮ ಹೇಳಿಕೆಯಲ್ಲಿ ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.
Discussion about this post