ನವದೆಹಲಿ : ದೇಶದಲ್ಲಿ ಕಲ್ಲಿದ್ದಲ ಕೊರತೆ ತೀವ್ರಗೊಂಡಿದ್ದು, ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ತೇಪೆ ಸಾರುತ್ತಲೇ ಬಂದಿತ್ತು. ಇದೀಗ ಕಲ್ಲಿದ್ದಲು ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಂಗಪ್ರವೇಶವಾಗಿದ್ದು, ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ್ದಾರೆ.
ಈ ನಡುವೆ ರಾಜ್ಯಗಳಲ್ಲಿ ತೀವ್ರವಾಗಿರುವ ಕಲ್ಲಿದ್ದಲು ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯಗಳ ಬೇಡಿಕೆಯನ್ನು ತಕ್ಕ ಮಟ್ಟಿಗೆ ಪೂರೈಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸೋಮವಾರ 1.77 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ವೇಗವಾಗಿ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದ್ದು, ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸುವ ಸಲುವಾಗಿ ದಿನದ 24 ಗಂಟೆಯೂ ರೈಲು ಸಂಚಾರ ನಡೆಸಲಿದೆ. ಜೊತೆಗೆ ಕಲ್ಲಿದ್ದಲಿನ ಅಭಾವವನ್ನು ತುರ್ತುಪರಿಸ್ಥಿತಿ ಎಂದು ರೈಲ್ವೆ ಇಲಾಖೆ ಘೋಷಿಸಿದ್ದು ದಿನದ 24 ಗಂಟೆ ಕಲ್ಲಿದ್ದಲು ಸಾಗಣೆಗಾಗಿ ಕಂಟ್ರೋಲ್ ರೂಂ ರಚನೆ ಮಾಡಲು ಎಲ್ಲಾ ರೈಲ್ವೆ ವಲಯಗಳ ಪ್ರಧಾನ ಮುಖ್ಯ ಕಾರ್ಯನಿರ್ವಾಹಕರಿಗೆ ಸೂಚಿಸಲಾಗಿದೆ.
ಕಲ್ಲಿದ್ದಲು ಕೊರತೆಯಿಂದ ದೆಹಲಿ, ತಮಿಳುನಾಡು, ರಾಜಸ್ಥಾನ, ಪಂಜಾಬ್, ಕರ್ನಾಟಕ ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಳ್ಳುವ ಭೀತಿ ಎದುರಾಗಿದೆ.
Discussion about this post