ಕೆಲಸದ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಟ್ಟುನಿಟ್ಟು, ಶಿಸ್ತಿನ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಇದೀಗ ತಮ್ಮ ಶಿಸ್ತನ್ನು ತನ್ನ ಸಂಪುಟ ಸಚಿವರು ಪಾಲಿಸಬೇಕು ಎಂದು ಮೋದಿ ಬಯಸಿದ್ದಾರೆ. ಕಚೇರಿಗಳಲ್ಲಿ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವ ನಿಯಮವಿರುವಂತೆ ಸಚಿವರುಗಳು ಕೂಡ ತಮ್ಮ ಕಚೇರಿಗೆ ನಿಗದಿತ ಸಮಯಕ್ಕೆ ಬರಬೇಕು, ಇಷ್ಟ ಬಂದಂತೆ, ಇಷ್ಟ ಬಂದಾಗ ಕಚೇರಿಗೆ ಬರೋದಲ್ಲ, ಆಯಾ ದಿನದ ಕೆಲಸ ಮಾಡಿ ಮುಗಿಸಬೇಕು, ಜನರ ಕುಂದು ಕೊರತೆಗಳನ್ನು ಆಲಿಸಬೇಕು ಎಂಬ ಕಡ್ಡಾಯ ಫರ್ಮಾನ್ ಹೊರಡಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಬುಧವಾರ ನಡೆದ ಮಂತ್ರಿ ಪರಿಷತ್ತಿನ ಮೊದಲ ಸಭೆಯಲ್ಲಿ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಕೆಲವು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಬೆಳಿಗ್ಗೆ 9.30ರೊಳಗೆ ಕಚೇರಿಗೆ ತಪ್ಪದೇ ಹಾಜರಾಗಿರಬೇಕು. ಮನೆಯಿಂದ ಮತ್ತು ಇತರ ಸ್ಥಳಗಳಲ್ಲಿ ಕೂತು ಕಾರ್ಯನಿರ್ವಹಿಸಬೇಡಿ, ನೀವು ಮಾಡುವ ಕೆಲಸಗಳಿಂದ ಬೇರೆಯವರಿಗೆ ಮಾದರಿಯಾಗಿರಿ. 40 ದಿನಗಳ ಸಂಸತ್ತು ಕಲಾಪದ ವೇಳೆ ಸಂಸದರು ಯಾವುದೇ ಬೇರೆ ವ್ಯವಹಾರ, ಭೇಟಿ, ಹೊರಗಡೆ ಹೋಗುವ ಕೆಲಸ ಇಟ್ಟುಕೊಳ್ಳಬೇಡಿ, ಸಂಸತ್ತು ಕಲಾಪಕ್ಕೆ ಪ್ರತಿದಿನ ಹಾಜರಾಗಿ ಎಂದಿದ್ದಾರೆ.
ಮುಖ್ಯವಾದ ಕಡತಗಳನ್ನು ಸಚಿವರು ರಾಜ್ಯ ಖಾತೆ ಸಚಿವರೊಂದಿಗೆ ಹಂಚಿಕೊಳ್ಳಬೇಕು. ಆ ಮೂಲಕ ಹಿರಿಯ ಸಚಿವರು ಕಿರಿಯರಿಗೆ ಮತ್ತು ಹೊಸದಾಗಿ ಸಚಿವರಾಗಿರುವವರಿಗೆ ಮಾರ್ಗದರ್ಶನ ಮಾಡಬೇಕು. ಆಯಾ ಇಲಾಖೆಯ ಅಧಿಕಾರಿಗಳೊಂದಿಗೆ, ಸಂಸದರೊಂದಿಗೆ ಸಂಪರ್ಕದಲ್ಲಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ತಾವು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕಾರ್ಯವೈಖರಿಯನ್ನೇ ಸಚಿವರುಗಳಿಗೆ ಉದಾಹರಣೆಯಾಗಿ ಕೊಟ್ಟ ಮೋದಿಯವರು, ಸರ್ಕಾರದ ಕಚೇರಿಗಳಲ್ಲಿ ಅಧಿಕಾರಿಗಳು ಬೆಳಗ್ಗೆ ಬರುವಷ್ಟರ ಹೊತ್ತಿಗೆ ನಾನು ಕೂಡ ಕಚೇರಿಗೆ ಬಂದಿರುತ್ತಿದ್ದೆ. ಅದರಿಂದ ಆಯಾ ದಿನದ ಸರ್ಕಾರದ ಕೆಲಸಗಳನ್ನು ತ್ವರಿತವಾಗಿ ಮಾಡಲು ಸಹಾಯವಾಗುತ್ತಿತ್ತು ಎಂದು ನೆನಪಿಸಿಕೊಂಡರಂತೆ.
Discussion about this post